

ಬೆಳಗಾವಿ: ಲಾಕ್‌ಡೌನ್ ಹಾಗೂ ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳೆ ನಷ್ಟ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಲಾಕ್‌ಡೌನ್ ಸಮಯದಲ್ಲಿ ಗೋವಿನ ಜೋಳ, ಬಿಳಿ ಜೋಳ, ಗೋಧಿ, ತರಕಾರಿ ಸೇರಿದಂತೆ ಅನೇಕ ಬೆಳೆಗಳು ಮಾರಾಟವಾಗದೆ ರೈತರು ಆರ್ಥಿಕ ಸಮಸ್ಯೆ ಎದುರಿಸಿದರು. ಅಲ್ಲದೆ, ಕೈಗೆ ಬಂದಿದ್ದ ಬೆಳೆಗಳ ಕಟಾವು ಮಾಡಲಾಗದೆ ಭೂಮಿಯಯೇ ಬೆಳೆಹಾನಿ ಉಂಟಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕೆಲ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರದಿಂದ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಸರ್ಕಾರ ತೋಟಗಾರಿಕೆ ಇಲಾಖೆ ವ್ಯಾಪ್ತಿಯ ಬೆಳೆಗಳಿಗೆ ಪರಿಹಾರ ಘೋಷಣೆ ಮಾಡಿದೆ. ಆದರೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿಲ್ಲ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಸಾವಿರಾರು ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ದಾಖಲಾತಿಗಳಲ್ಲಿ ಅರ್ಹ ರೈತರ ಹೆಸರನ್ನು ಕೈ ಬಿಡಲಾಗಿದೆ. ಈ ಕುರಿತು ಮೇಲಿಂದ ಮೇಲೆ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸಂಘದ ಬೆಳಗಾವಿ ತಾಲೂಕಾಧ್ಯಕ್ಷ ಅಪ್ಪಾಸಾಹೇಬ ದೇಸಾಯಿ, ಸುಭಾಷ ದಾಯಗೊಂಡೆ, ಮಾರುತಿ ಕಡೇಮನಿ, ನಾಮದೇವ ದುಡುಂ, ರಾಮನಗೌಡ ಪಾಟೀಲ ಇದ್ದರು.