

ಹೊಸಪೇಟೆ: ಸಾಲಮನ್ನಾ ಸೇರಿದಂತೆ ಇತರೆ ಬೇಡಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪ್ರತಿಭಟಿಸಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸAಗಯ್ಯ ಮಾತನಾಡಿ, ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಹಾಗೂ ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ ನೀಡಬೇಕು. ರೈತರ ಆತ್ಮ ಹತ್ಯೆ ಮತ್ತು ವಲಸೆ ತಡೆಯಲು ಸಾಲ ಮನ್ನಾ ಮಾಡಬೇಕು. ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡಬೇಕು. ಎಲ್ಲ ಕೃಷಿ ಮತ್ತು ಪಶು ಸಂಗೋಪನಾ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೋರೇಟ್ ಪರವಾದ ಪಿಎಂಎಫ್‌ಬಿವೈ ಯೋಜನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಜೀವಹಾನಿಗೆ 1 ಕೋಟಿ ರೂ. ಪರಿಹಾರ ಒದಗಿಸಬೇಕು. ಬೆಳೆ ಮತ್ತು ಸರಕು ಪ್ರಾಣಿ ನಷ್ಟಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು. ಸಂಸತ್ತಿನಲ್ಲಿ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಒಳಪಡಿಸದೆ ಸಿಪಿಸಿ ಮತ್ತು ಸಿಆರ್‌ಪಿಸಿ ಕಾಯಿದೆಗಳನ್ನು ಬದಲಾಯಿಸಿ, ಜನತೆಯ ಮೇಲೆ ಹೇರಿರುವ 3 ಕ್ರಿಮಿನಲ್ ಕಾಯಿದೆಗಳನ್ನು ರದ್ದು ಮಾಡಬೇಕು. 736 ರೈತ ಹುತಾತ್ಮರ ಸ್ಮರಣೆಗಾಗಿ ಸಿಂಘು, ಟೆಕ್ರಿ ಗಡಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಬೇಕು. ಸೂಕ್ತ ಪರಿಹಾರ ನೀಡಬೇಕು. ರೈತ ಹೋರಾಟದ ವಿರುದ್ಧ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ವಿಭಾಗೀಯ ಕಾರ್ಯದರ್ಶಿ ಗೋಣಿಬಸಪ್ಪ, ಪ್ರಮುಖರಾದ ಪಿ.ವೆಂಕಟೇಶ್, ಗುಜ್ಜಲ್ ಗಣೇಶ್, ಗಂಟೆ ಸೋಮಶೇಖರ, ತಂಬ್ರಹಳ್ಳಿ ರವಿ, ಆರ್.ಎಂ.ವೀರೇಶಿ, ರಾಜಾಬಕ್ಷಿ, ಹುಸೇನ್ ಸಾಬ್, ಗೋವಿಂದರಾಜ್, ಪರಮೇಶ್ವರಗೌಡ ಇತರರಿದ್ದರು.