

ಬೆಳಗಾವಿ: ಇಷ್ಟು ದಿನ ಮಳೆಯಾಶ್ರಿತವಾಗಿಯೇ ಗೋಡಂಬಿ, ತರಕಾರಿ ಬೆಳೆಯುತ್ತಿದ್ದ ಪಶ್ಚಿಮ ಭಾಗದ ಗ್ರಾಮಗಳ ಕೃಷಿಕರ ಮೊಗದಲ್ಲಿ ‘ಕಿಣಯೇ ಡ್ಯಾಂ’ ನಿರ್ಮಾಣ ಹೊಸ ಭರವಸೆ ಮೂಡಿಸಿದೆ.
ಜಲಸಂಪನ್ಮೂಲ ಇಲಾಖೆಯ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಬಳಿ ಹರಿಯುವ ಮಂಗೇತ್ರಿ ನಾಲಾಕ್ಕೆ ಅಡ್ಡಲಾಗಿ 0.113 ಟಿಎಂಸಿ ಸಾಮರ್ಥ್ಯದ ‘ಕಿಣಯೇ ಡ್ಯಾಂ’ ನಿರ್ಮಿಸುತ್ತಿದೆ. ಇದರಿಂದ ಕಿಣಯೇ, ಬಾದರವಾಡಿ, ರಣಕುಂಡೆ, ವಾಘವಾಡೆ, ಸಂತಿಬಸ್ತವಾಡ ಗ್ರಾಮಗಳ 1,200 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ.
ಬೆಳಗಾವಿ-ಜಾಂಬೋಟಿ ಮಾರ್ಗದ ಸುತ್ತಮುತ್ತಲಿನ ಗ್ರಾಮಗಳು ಸಮಶೀತೋಷ್ಣ ವಾತಾವರಣ ಹೊಂದಿದ್ದು, ಈ ಭಾಗದ ಅನೇಕ ಸಣ್ಣ ಮತ್ತು ಮಧ್ಯಮ ಗಾತ್ರದ ರೈತ ಕುಟುಂಬಗಳು ಪಾರಂಪರಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಬರುತ್ತಿವೆ. ತೆರೆದ ಬಾವಿ, ಕೊಳವೆ ಬಾವಿ ಹಾಗೂ ಮಳೆಯಾಶ್ರಿತವಾಗಿ ಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಗೋಡಂಬಿ, ತರಕಾರಿ ಸೇರಿದಂತೆ ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ. ಕೆಲವೊಮ್ಮೆ ವರುಣ ಅವಕೃಪೆ ತೋರಿದಾಗ ಬೆಳೆಗೆ ನೀರಿಲ್ಲದೆ ಕಂಗಾಲಾಗುವುದು ಮಾತ್ರವಲ್ಲದೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಾರೆ.
ರೈತರ ಕನಸು ನನಸು: ಸದ್ಯ ಅಂತಿಮ ಹಂತದಲ್ಲಿರುವ ಕಿಣಯೇ ಡ್ಯಾಂ ನಿರ್ಮಾಣ ಕಾಮಗಾರಿಯು ರೈತರಿಗೆ ಹೊಸ ಭರವಸೆ ಮೂಡಿಸಿದೆ. ಹಲವು ದಶಕಗಳಿಂದ ಮಳೆಯಾಶ್ರಿತವಾಗಿದ್ದ ಭೂಮಿ ಇದೀಗ ನೀರಾವರಿ ಸೌಲಭ್ಯ ಪಡೆದುಕೊಳ್ಳಲಿದೆ. ಅಂದುಕೊಂಡಂತೆ ಕಾಮಗಾರಿ ಪೂರ್ಣಗೊಂಡರೆ ಜೂನ್ ಅಂತ್ಯಕ್ಕೆ ಡ್ಯಾಂ ಲೋಕಾರ್ಪಣೆಯಾಗಲಿದೆ. ಬಹುವಾರ್ಷಿಕ ಬೆಳೆ ಬೆಳೆಯಲು ಮುಂದಾದ ರೈತರ ಕನಸು ನನಸಾಗಲಿದೆ ಎಂದು ಬಾದರವಾಡಿ ಗ್ರಾಮದ ಬಸಪ್ಪ ಸುಳೇಗೆಕರ, ವಿಠ್ಠಲ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.
ಸೌಲಭ್ಯಗಳಿಗೆ ವರವಾದ ಡ್ಯಾಂ: ಸುಮಾರು 50 ಎಕರೆ ಪ್ರದೇಶದಲ್ಲಿ ನಿರ್ಮಾಣ ಗೊಳ್ಳುತ್ತಿ ರುವ ಕಿಣಯೇ ಡ್ಯಾಂ ಸುತ್ತಮುತ್ತ ಗುಡ್ಡ, ಅರಣ್ಯ ಪ್ರದೇಶವೇ ಅಧಿಕ ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ ಇಲ್ಲಿ ಸುರಿಯುವ ವಾರ್ಷಿಕ 1638.16 ಎಂ.ಎಂ. ಮಳೆ ನೀರಿನಲ್ಲಿ ಶೇ.50ರಷ್ಟು ಮಳೆ ನೀರು ಡ್ಯಾಂನಲ್ಲಿ ಸಂಗ್ರಹವಾಗಲಿದೆ. ಈ ನೀರಿನಿಂದ ಐದು ಗ್ರಾಮಗಳಲ್ಲಿನ 1,200 ಹೆಕ್ಟೇರ್ ಕೃಷಿ ಭೂಮಿ ನೀರಾವರಿ ಸೌಲಭ್ಯಕ್ಕೆ ಒಳಗಾಗಲಿದೆ. ಡ್ಯಾಂನ ಎಡದಂಡೆ ಕಾಲುವೆ ಉದ್ದ 4.23 ಮತ್ತು ಬಲದಂಡೆ ಕಾಲುವೆ ಉದ್ದ 6.19 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಬಲ ಮತ್ತು ಎಡ ದಂಡೆ ಕಾಲುವೆ ನಿರ್ಮಾಣಕ್ಕೆ ಒಟ್ಟು 179 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರಲ್ಲಿ 149.31ಎಕರೆ ಭೂಮಿ ನೀಡಿರುವ ರೈತರಿಗೆ ಪರಿಹಾರ ವಿತರಣೆಯಾಗಿದೆ. ಬಾಕಿ 30.31 ಎಕರೆ ಭೂಮಿ ನೀಡಿರುವ ರೈತರಿಗೆ ಎಕರೆಗೆ 10 ಲಕ್ಷ ರೂ.ನಂತೆ ಒಟ್ಟು 3 ಕೋಟಿ ರೂ. ಪರಿಹಾರ ಬಾಕಿ ಇದೆ ಎಂದು ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತ ಅರವಿಂದ ಕಣಗಲಿ ತಿಳಿಸಿದ್ದಾರೆ.
ಕಿಣಯೇ ಡ್ಯಾಂ ಕಾಮಗಾರಿ ಅಂತಿಮ ಹಂತದಲ್ಲಿದ್ದು, 2021ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇದರಿಂದ ವರ್ಷದ ಅಂತ್ಯಕ್ಕೆ 1,200 ಹೆಕ್ಟೇರ್ ಕೃಷಿ ಭೂಮಿ ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ. ಕರೊನಾ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಬಾಕಿ ಪರಿಹಾರವನ್ನೂ ಬಿಡುಗಡೆ ಮಾಡಲಾಗಿದೆ. | ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ