

ಹನೂರು: ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ರೈತರು ಕೃಷಿಗೆ ಸಮರ್ಪಕವಾಗಿ ನೀರಾವರಿ ಸೌಕರ್ಯ ಒದಗಿಸುವಂತೆ ಕೇಳಲು ಹಕ್ಕಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯ ಭರ್ತಿಯಾದ ಹಿನ್ನೆಲೆ ಶನಿವಾರ ಕೊಳ್ಳೇಗಾಲದ ಶಾಸಕ ಎ.ಆರ್ ಕೃಷ್ಣಮೂರ್ತಿ ಅವರೊಂದಿಗೆ ಬಾಗಿನ ಅರ್ಪಿಸಿದ ಬಳಿಕ ಆಯೋಜಿಸಿದ್ಧ ಸಭೆಯಲ್ಲಿ ಮಾತನಾಡಿದರು.
ಈ ವ್ಯಾಪ್ತಿಯ ರೈತರಿಗೆ ಈವರೆಗೂ ಕೃಷಿಗೆ ಅಗತ್ಯಕ್ಕೆ ತಕ್ಕಂತೆ ನೀರೊದಗಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರದಿಂದ ನೋಟಿಫೀಕೇಷನ್ ಹೊರಡಿಸಿರುವುದರಿಂದ ರೈತರು ನೀರಾವರಿ ಸೌಕರ್ಯ ಕೇಳಲು ಹಕ್ಕಿದೆ. ಹಾಗೆಯೇ ನೀರೊದಗಿಸಲು ಅವಕಾಶ ಸಿಕ್ಕಿದಂತಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕ ನೀರಾವರಿ ಸೌಕರ್ಯ ದೊರಕಲಿದೆ. ರೈತರು ಇದರ ಪ್ರಯೋಜನ ಪಡೆಯಬೇಕು. ಕಾಲುವೆಗಳು ದುರಸ್ತಿಯಾಗಿದ್ದು ರಿಪೇರಿ ಪಡಿಸಲು ಅಗತ್ಯ ಕ್ರಮವಹಿಸಲಾಗಿದೆ. ಈ ಜಲಾನಯ ಪ್ರದೇಶ ಪ್ರವಾಸೋದ್ಯಮಕ್ಕೆ ಪೂರಕವಾಗಿರುವುದರಿಂದ ಅಭಿವೃದ್ಧಿಗೆ ಗಮನಹರಿಸಲಾಗಿದೆ. ಆದಷ್ಟು ಬೇಗ ಸರ್ಕಾರದಿಂದ ಅನುದಾನ ತಂದು ಕಾರ್ಯರೂಪಗೊಳಿಸಲಾಗುವುದು. ಇದರಿಂದ ಈ ಭಾಗದ ಯುವಕರಿಗೆ ಉದ್ಯೋಗ ದೊರಕಿದಂತಾಗುತ್ತದೆ ಎಂದು ತಿಳಿಸಿದರು.
ರಾಮನಗುಡ್ಡೆಗೆ ತಿಂಗಳೊಳಗೆ ನೀರು: ತಾಲೂಕಿನಲ್ಲಿ ವಾರ್ಷಿಕ ಸರಾಸರಿ 15 ಟಿಎಂಸಿಯಷ್ಟು ಮಳೆಯಾಗುತ್ತಿದೆ. ಕೃಷಿಗೆ ಅಗತ್ಯವಿರುವುದು 4 ಟಿಎಂಸಿ ನೀರು ಮಾತ್ರ. ಆದರೆ ಶಾಶ್ವತ ನೀರಾವರಿ ಯೋಜನೆ ಇಲ್ಲದ ಪರಿಣಾಮ ತಮಿಳುನಾಡಿಗೆ 177 ಟಿಎಂಸಿ ನೀರು ಹರಿಯುವುದರ ಜತೆಗೆ 90 ಟಿಎಂಸಿ ನೀರು ಹರಿಯುತ್ತಿರುವುದು ಬೇಸರದ ಸಂಗತಿ. ಹೀಗಾಗಾಗಿ ನೀರಾವರಿ ಸಂಬಂಧ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ರಾಮನಗುಡ್ಡೆ, ಹುಬ್ಬೆಹುಣಸೆ ಡ್ಯಾಂ ಮಳೆಯಾಗದ ಪರಿಣಾಮ ಬತ್ತಿ ಹೋಗುತ್ತಿತ್ತು. ಇದರಿಂದ ರೈತರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಇದನ್ನು ಮನಗಂಡು ಈ 2 ಡ್ಯಾಂಗಳ ಆಸುಪಾಸಿನಲ್ಲಿ ಒತ್ತುವರಿಯನ್ನು ತೆರೆವುಗೊಳಿಸಿ, ಹೂಳೆತ್ತುವ ಕಾರ್ಯ ನಡೆಯುತ್ತಿದೆ. ರಾಮನಗುಡ್ಡೆ ಡ್ಯಾಂಗೆ ಒಂದು ತಿಂಗಳೊಳಗೆ ನದಿ ಮೂಲದಿಂದ ನೀರು ತುಂಬಿಸಲಾಗುವುದು ಎಂದರು.
ಶಾಶ್ವತ ನೀರಾವರಿ ಯೋಜನೆ ಅಗತ್ಯ: ಕೊಳ್ಳೇಗಾಲದ ಶಾಸಕ ಎ.ಆರ್ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯು ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರ ಹಾಗೂ ಹೆಚ್ಚು ಅರಣ್ಯಧಾಮದಿಂದ ಕೂಡಿರುವುದರ ಜತೆಗೆ ನೀರಾವರಿಗೆ ಹೆಚ್ಚಿನ ಅವಕಾಶವಿದೆ. ಕಬಿನಿ ಜಲಾಶಯದಿಂದ ಎಚ್.ಡಿ ಕೋಟೆ, ಚಾ.ನಗರ, ಯಳಂದೂರು, ಕೊಳ್ಳೇಗಾಲ ಭಾಗಕ್ಕೆ ನೀರಾವರಿ ಅನುಕೂಲತೆಯನ್ನು ಕಲ್ಪಿಸಲಾಗಿದೆ. ಆದ್ದರಿಂದ ರೈತರು ಸಮರ್ಪಕ ನೀರಾವರಿ ಸೌಕರ್ಯವನ್ನು ಪಡೆಯಲು ಧ್ವನಿ ಎತ್ತಬೇಕು. ಗುಂಡಾಲ್ ಜಲಾಶಯದ ಅಭಿವೃದ್ಧಿಗಾಗಿ 50 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಶಾಸಕ ಎಂ.ಆರ್.ಮಂಜುನಾಥ್ ಸಹ ನೀರಾವರಿಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಈ ಭಾಗದಲ್ಲಿ ನೀರಾವರಿಗೆ ಶಾಶ್ವತ ಯೋಜನೆ ಇಲ್ಲದ ಪರಿಣಾಮ ತಮಿಳುನಾಡಿಗೆ ಹೆಚ್ಚಿನ ನೀರು ಹರಿಯುತ್ತಿದೆ. ಬೇಸಿಗೆ ಸಮಯದಲ್ಲೂ ಕೆಆರ್‌ಎಸ್‌ನಲ್ಲಿ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಬೇಕಾದ ಸ್ಥಿತಿ ಇದೆ. ಇದು ಎಲ್ಲ ಸರ್ಕಾರಗಳ ವೈಫಲ್ಯವೂ ಆಗಿದೆ. ಎಂದರು.
ಕಾಡಾ ಆಡಳಿತಾಧಿಕಾರಿ ಮಹೇಶ್ ಮಾತನಾಡಿ, ಗುಂಡಾಲ್ ಜಲಾಶಯವು 1979ರಲ್ಲಿ ನಿರ್ಮಿಸಲಾಗಿದ್ದು, 15,100 ಅಚ್ಚುಕಟ್ಟು ನೀರಾವರಿ ಪ್ರದೇಶವನ್ನು ಹೊಂದಿದೆ. 7,300 ಎಕರೆಗೆ ನೀರೊದಗಿಸಬೇಕಿದೆ. ಕಾಲುವೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಒಂದು ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ಉದ್ದನೂರು ಪ್ರಸಾದ್, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್ ದತ್ತೇಶ್ ಕುಮಾರ್, ಜಿಪಂ ಮಾಜಿ ಸದಸ್ಯ ನಾಗೇಂದ್ರ ಬಾಬು, ಡಿಎಎಸ್ ಸಂಚಾಲಕ ಸಿದ್ದರಾಜು, ನೀರಾವರಿ ಇಲಾಖೆಯ ಇಇ ಈರಣ್ಣ, ಎಇಇಗಳಾದ ರಾಮಕೃಷ್ಣ, ಬಸವೇಶ್ ಇದ್ದರು.