

ತಿ.ನರಸೀಪುರ: ಚಿನ್ನಾಭರಣಗಳನ್ನು ಅಡಮಾನವಿಟ್ಟು ಪಡೆದಿರುವ ಸಾಲಕ್ಕೆ ಬಡ್ಡಿ ಕಟ್ಟಿಸಿಕೊಂಡು ಸಾಲ ನವೀಕರಣಗೊಳಿಸದೆ ಇದೀಗ ಒಡವೆ ಮೇಲಿನ ಸಾಲ ಮತ್ತು ಬಡ್ಡಿ ಪಾವತಿಸುವಂತೆ ರೈತರಿಗೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಕಬ್ಬು ಬೆಳೆಗಾರರ ಸಂಘದ ಮುಖಂಡರು ಹಾಗೂ ಪದಾಧಿಕಾರಿಗಳು ಕೆನರಾ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗ ಜಮಾವಣೆಗೊಂಡಿದ್ದ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಮುಖಂಡರು, ಬ್ಯಾಂಕ್ ಬಾಗಿಲನ್ನು ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಹವಾಲು ಆಲಿಸಲು ಬಂದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಂಘದ ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ, ರೈತರು ಕೃಷಿ ಚಟುವಟಿಕೆಗಾಗಿ ಬ್ಯಾಂಕ್‌ನಲ್ಲಿ ಒಡವೆಗಳನ್ನು ಅಡವಿಡಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಸಾಲದ ಅಸಲು ಮತ್ತು ಬಡ್ಡಿ ಹಣ ಪಾವತಿಗೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ಬಡ್ಡಿ ಹಣ ಪಾವತಿಸಿಕೊಂಡು ಸಾಲನವೀಕರಣಗೊಳಿಸಬೇಕು. ಸಿಬಿಲ್ ಸ್ಕೋರ್ ಪರಿಗಣಿಸದೆ ಬೆಳೆ ಸಾಲ ನೀಡಬೇಕು. ಸಬ್ಸಿಡಿ ಸೌಲಭ್ಯದಡಿ ಸಾಲ ಸೌಲಭ್ಯವನ್ನು ಕಲ್ಪಿಸಬೇಕು. ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಬ್ಯಾಂಕ್‌ನ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದ್ದರಿಂದ ಒಂದು ತಾಸಿಗೂ ಹೆಚ್ಚು ಕಾಲ ಗ್ರಾಹಕರು ಪರದಾಡುವಂತಾಗಿತ್ತು. ಬಳಿಕ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿ ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಮಹಿಳಾ ಅಧ್ಯಕ್ಷೆ ಮುಡುಕನಪುರ ರೂಪಾ, ಮುಖಂಡರಾದ ಬಿ.ಪಿ. ಪರಶಿವಮೂರ್ತಿ, ಎಂ.ಪ್ರದೀಪ್, ರಾಜೇಶ್, ಅಪ್ಪಣ್ಣ, ಕೆ.ಎಂ. ಶಿವಪ್ರಸಾದ್, ಕರೋಹಟ್ಟಿ ರಾಜಬುದ್ಧಿ, ನಾಗರಾಜ್, ಹ್ಯಕನೂರು ಪ್ರದೀಪ್, ಗುರುಮಲ್ಲಪ್ಪ, ಬನ್ನಹಳ್ಳಿ ಹುಂಡಿ ರಾಜೇಂದ್ರ, ವಾಚ್ ಕುಮಾರ, ತರಕಾರಿ ನಿಂಗರಾಜು, ಕೆ ಇ ಬಿ ಯೋಗೇಶ, ಆದಿಬೆಟ್ಟಹಳ್ಳಿ ರವಿ, ಸೋಮನಾಥಪುರ ಶೇಖರ್, ಸತೀಶ್, ಬಸವಣ್ಣ, ಮಂಟೇಸ್ವಾಮಿ, ಬಸವಯ್ಯ ಇತರರು ಇದ್ದರು.