ಅಡಕೆ ಹಳದಿ ರೋಗ ಸಂಶೋಧನೆ, ಕೃಷಿಕರು ಖುಷ್

Arecanut
Published on

ಪುತ್ತೂರು: ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಅಡಕೆಗೆ ಹಳದಿ ರೋಗ ಸಂಶೋಧನೆ ಮತ್ತು ಕೃಷಿ ನಾಶವಾದ ಕೃಷಿಕರಿಗೆ ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ ಮುಖ್ಯಮಂತ್ರಿ ಬಜೆಟ್‌ನಲ್ಲಿ 25 ಕೋಟಿ ರೂ.ಅನುದಾನ ಘೋಷಿಸಿರುವುದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಕರಾವಳಿ ಮತ್ತು ಮಲೆನಾಡಿನ ಶಾಸಕರು ಹಾಗೂ ಅಡಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೊ ಇತ್ತೀಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕೃಷಿಕರಿಗೆ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಬೇಕು, ಸಮಗ್ರ ಸಂಶೋಧನೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದರು. ಕ್ಯಾಂಪ್ಕೊ ಮತ್ತು ಅಡಕೆ ಬೆಳೆ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸುಳ್ಯದ ತೊಡಿಕಾನದಲ್ಲಿ ಅಡಕೆ ಬೆಳೆಗಾರರ ಸಭೆ ಮತ್ತು ಸಂವಾದ ನಡೆಸಿ, ಪರಿಹಾರಕ್ಕೆ ಒತ್ತಾಯಿಸಲಾಗಿತ್ತು.

1,287 ಹೆಕ್ಟೇರ್ ಪ್ರದೇಶ ರೋಗಕ್ಕೆ ಆಹುತಿ: ಸುಳ್ಯ ತಾಲೂಕಿನಲ್ಲಿ ಹಳದಿ ರೋಗ ವಿಪರೀತವಾಗಿ ಹರಡುತ್ತಿದೆ. 1,287 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ತೋಟ ರೋಗಕ್ಕೆ ಆಹುತಿಯಾಗಿದೆ. ಇದರಿಂದಾಗಿ ಈ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಲಕ್ಷಾಂತರ ಕುಟುಂಬಗಳ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕೆಲವು ಕೃಷಿಕರು ಹಳದಿ ರೋಗಬಾಧಿತ ತೋಟದ ಮರಗಳನ್ನು ಕಡಿಯಲು ಆರಂಭಿಸಿದ್ದಾರೆ. ಹಳದಿ ರೋಗ ಬಾಧೆ ಅತೀ ಹೆಚ್ಚು ಕಂಡು ಬಂದಿರುವ ಸಂಪಾಜೆ, ಅರಂತೋಡು, ತೊಡಿಕಾನ, ಆಲೆಟ್ಟಿ, ಮರ್ಕಂಜ, ಮಡಪ್ಪಾಡಿ, ಅಮರ ಮೂಡ್ನೂರು, ಕಲ್ಮಕ್ಕಾರು ಗ್ರಾಮಗಳಲ್ಲಿ ಸುಮಾರು ಐದು ಸಾವಿರ ಎಕರೆಗಿಂತಲೂ ಅಧಿಕ ಪ್ರದೇಶದಲ್ಲಿ ಅಡಕೆ ಕೃಷಿಯಿದೆ. ಸಂಪಾಜೆಯಲ್ಲಿ ಪ್ರಥಮ ಬಾರಿಗೆ ಅಡಿಕೆಗೆ ಹಳದಿ ರೋಗ ಕಂಡು ಬಂದಿದೆ. 25 ವರ್ಷಗಳ ಹಿಂದೆಯೂ ಸಂಪಾಜೆ, ಕೊಡಗು ಸಂಪಾಜೆ, ಚೆಂಬು ಗ್ರಾಮದ ಅಡಕೆ ಕೃಷಿಯನ್ನು ಹಳದಿ ರೋಗ ನಾಶ ಮಾಡಿತ್ತು.

ಸಿಪಿಸಿಆರ್‌ಐ ಅಧ್ಯಯನ ಆರಂಭ: ಸುಳ್ಯದ ಅರಂತೋಡಿನಲ್ಲಿ 650 ಎಕರೆಗೂ ಹೆಚ್ಚು ಮತ್ತು ತೊಡಿಕಾನದಲ್ಲಿ 550 ಎಕರೆಗೂ ಮಿಕ್ಕಿ ಅಡಕೆ ತೋಟಗಳು ಹಲದಿ ಎಲೆ ರೋಗಬಾಧೆಯಿಂದ ನಾಶವಾಗಿವೆ. ಆಲೆಟ್ಟಿಯಲ್ಲಿ 1200, ಮರ್ಕಂಜದಲ್ಲಿ 720, ಕಲ್ಮಕಾರಿನಲ್ಲಿ 430 ಎಕರೆ ಪ್ರದೇಶದಲ್ಲಿ ಅಡಕೆ ತೋಟ ಈ ವಿಷವರ್ತುಲದಲ್ಲಿದೆ. ಕಾಸರಗೋಡಿನ ಸಿಪಿಸಿಆರ್‌ಐ 7 ಕೋಟಿ ರೂ.ವೆಚ್ಚದಲ್ಲಿ ಹಳದಿ ಎಲೆ ರೋಗದ ನಿಯಂತ್ರಣ, ರೋಗ ನಿರೋಧಕ ತಳಿಯ ಅಭಿವೃದ್ಧಿ ಬಗ್ಗೆ ಸಂಶೋಧನೆ ನಡೆಸುತ್ತಿದೆ.

ಹಳದಿ ರೋಗ ಸಂಶೋಧನೆ, ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ ಬಜೆಟ್‌ನಲ್ಲಿ 25 ಕೋಟಿ ರೂ.ಘೋಷಣೆ ನಮ್ಮ ಶ್ರಮಕ್ಕೆ ಸಂದ ಜಯ. 13,994 ಸರ್ವೇ ನಂಬರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು 7,048 ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಹಳದಿ ರೋಗ ಕಂಡುಬಂದಿದೆ. 1,217 ಹೆಕ್ಟೇರ್ ಪ್ರದೇಶದಲ್ಲಿ 14,30,440 ಅಡಕೆ ಮರಗಳು ರೋಗಬಾಧಿತ ಎಂದು ಪರಿಗಣಿಸಲಾಗಿದೆ. - ಕಿಶೋರ್ ಕೊಡ್ಗಿ ಅಧ್ಯಕ್ಷ, ಕ್ಯಾಂಪ್ಕೊ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net