ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

30 LXR
Published on

ಲಕ್ಷ್ಮೇಶ್ವರ: ಹಿಂಗಾರು ಹಂಗಾಮಿನ ಬಿತ್ತನೆ ಬೀಜಕ್ಕಾಗಿರೈತರು ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದಿದ್ದರು.

ಶುಕ್ರವಾರದಿಂದ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬೆಳಗ್ಗೆಯೇ ರೈತರು ಸಾಲುಗಟ್ಟಿದ್ದರು. ಕೃಷಿ ಇಲಾಖೆ ಅಧಿಕಾರಿಗಳು, ಶಾಸಕರು ಬಂದು ಬೀಜ ವಿತರಣೆಗೆ ಚಾಲನೆ ನೀಡಲಿದ್ದಾರೆ. ಅಲ್ಲಿಯವರೆಗೂ ರೈತರು ಕಾಯಬೇಕು ಎಂದು ತಿಳಿಸಿದರು. ರೈತರು ಮತ್ತು ಅಧಿಕಾರಿಗಳು 1 ಗಂಟೆ ಕಾದಿದ್ದರೂ ಶಾಸಕರು ಬರಲಿಲ್ಲ.

‘ಶಾಸಕರನ್ನು ತೆಗೆದುಕೊಂಡು ನಾವೇನು ಮಾಡಬೇಕು. ನಮಗೆ ಬೀಜ ಕೊಡತೀರೋ? ಇಲ್ಲವೋ ಹೇಳಿ’ ಎಂಬ ರೈತ ಕಾಶಪ್ಪ ಲಿಂಗಶೆಟ್ಟಿ ಅವರ ಮಾತಿಗೆ ಎಲ್ಲ ರೈತರು ದನಿಗೂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಶಿರಹಟ್ಟಿ ಕೃಷಿ ಇಲಾಖೆ ಕಚೇರಿಯ ಮುಂದೆಯೂ ನಡೆಯಿತು. ಗೊಂದಲಕ್ಕೀಡಾದ ಕೃಷಿ ಇಲಾಖೆ ಅಧಿಕಾರಿಗಳು ಮೊಬೈಲ್‌ನಲ್ಲಿಯೇ ಶಾಸಕರ ಒಪ್ಪಿಗೆ ಪಡೆದು ರೈತರಿಗೆ ಬೀಜ ವಿತರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net