

ಅಣ್ಣಿಗೇರಿ: ಆಪತ್ತಿಗಾಗಲಿ ಎಂದು ಕೆಲವರು, ಹಿಂಗಾರು ಬಿತ್ತನೆಗೆ ಅನುಕೂಲವಾಗಲೆಂದು ಕೆಲವರು ಸರ್ಕಾರಿ ಗೋದಾಮಿನಲ್ಲಿ ಸಂಗ್ರಹಿಸಿದ್ದ ಕಡಲೆ, ಹೆಸರು ಮುಂತಾದ ಧಾನ್ಯಗಳು ಮಾಯವಾಗಿರುವ ಪ್ರಸಂಗ ಇಲ್ಲಿನ ಎಪಿಎಂಸಿ ಆವರಣದ ರಾಜ್ಯ ಗೋದಾಮಿನಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಗೋದಾಮಿನತ್ತ ದೌಡಾಯಿಸಿದ ರೈತರು ತಾವಿಟ್ಟಿದ್ದ ಕಾಳು ಕಡಿ ಅಲ್ಲಿ ಇಲ್ಲದ್ದನ್ನು ನೋಡಿ ಹೌಹಾರಿದ್ದಾರೆ. ಗೋದಾಮಿನಲ್ಲಿ ತಾಲೂಕಿನ ರೈತರು ಶೇಖರಣೆ ಮಾಡಿ ಇಟ್ಟಿದ್ದರಲ್ಲಿ 2480 ಚೀಲ ಕಡಲೆ ಹಾಗೂ 1250 ಚೀಲ ಹೆಸರು ಮಾಯವಾಗಿರುವುದು ತಡವಾಗಿ ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಿಂದ ಬುಧವಾರ ಬಂದ ಹಿರಿಯ ಅಧಿಕಾರಿಗಳು ಲೆಕ್ಕ ಪರಿಶೀಲನೆ ಮಾಡಿದ ನಂತರ ಈ ಕುರಿತು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಧಾನ್ಯಗಳ ಚೀಲಗಳು ಕಳ್ಳತನ ಆಗಿರುವುದನ್ನು ಲೆಕ್ಕ ಹಾಕಿದರೆ 1.3 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಧಾನ್ಯಗಳು ಎಂದು ಅಂದಾಜಿಸಲಾಗಿದೆ. ಘಟನೆ ತಿಳಿದು ಸ್ಥಳಕ್ಕೆ ದೌಡಾಯಿಸಿದ ಡಿವಿಜನಲ್ ಮ್ಯಾನೇಜರ್ ದೇವಪ್ಪ ಲಂಬಾಣಿ ಕಡತಗಳನ್ನು ಪರಿಶೀಲಿಸಿದರು. ಈ ಮಧ್ಯೆ ಉಗ್ರಾಣ ಮ್ಯಾನೇಜರ್ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕರ ಭೇಟಿ: ಅಣ್ಣಿಗೇರಿಯ ಉಗ್ರಾಣದಲ್ಲಿನ ಕಾಳು ಕಳ್ಳತನ ಆಗಿರುವ ಸುದ್ದಿ ತಿಳಿದು ಶಾಸಕ ಎನ್.ಎಚ್. ಕೋನರಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ರೈತರಿಗೆ ಆದ ಅನ್ಯಾಯ ಸರಿಪಡಿಸಬೇಕು ಎಂದು ಸೂಚಿಸಿದರು.
ನಾವು ಬೆಳೆದ ಕಾಳುಗಳನ್ನು ದಾಸ್ತಾನು ಮಾಡಲು ಉಗ್ರಾಣಕ್ಕೆ ತರುತ್ತೇವೆ. ಆದರೆ, ಗೋದಾಮಿನಲ್ಲಿ ಇಂತಹ ಘಟನೆಗಳಾದರೆ ರೈತರು ಮಾಡಬೇಕು. ಈಗಾಗಲೇ ಸಂಗ್ರಹಿಸಿಟ್ಟಿ ಧಾನ್ಯಗಳ ಮೇಲೆ ಸಾಲ ಪಡೆದುಕೋಂಡಿದ್ದೇವೆ. ಬಿತ್ತನೆಗೂ ಬೀಜ ಇಲ್ಲದಂಥ ಪರಿಸ್ಥಿತಿ ಎದುರಾಗಿದೆ.> ಶಿವರಡ್ಡಿ ಲಿಂಗರಡ್ಡಿ, ಶಿಶುವಿನಹಳ್ಳಿ ಗ್ರಾಮದ ರೈತ ಸುದ್ದಿ ತಿಳಿದ ತಕ್ಷಣ ಅಣ್ಣಿಗೇರಿ ಉಗ್ರಾಣಕ್ಕೆ ಆಗಮಿಸಿ ಕಡತ ಪರಿಶೀಲಿಸಲಾಗಿದೆ. ಮಹಜರು ಮಾಡಲಾಗಿದ್ದು, ತಲೆ ಮರೆಸಿಕೊಂಡಿರುವ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗುವುದು.> ಡಾ. ನೀಲಪ್ಪ ಲಮಾಣಿ, ಧಾರವಾಡ ವಿಭಾಗೀಯ ಅಧಿಕಾರಿ ಉಗ್ರಾಣ ನಿಗಮ ಉಗ್ರಾಣದಲ್ಲಿ ಇಟ್ಟಿರುವಂಥ ಕಾಳುಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡ ಅಧಿಕಾರಿ ಪತ್ತೆಗಾಗಿ ಈಗಾಗಲೇ ಪೊಲೀಸ್ ಇಲಾಖೆಗೆ ತಾಕೀತು ಮಾಡಲಾಗಿದೆ. ರೈತರಿಗೆ ಅನ್ಯಾಯವಾಗಬಾರದು. ಶೀಘ್ರ ತಲೆಮರೆಸಿಕೊಂಡ ಅಧಿಕಾರಿಯನ್ನು ಪತ್ತೆ ಹಚ್ಚಿ, ರೈತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು.> ಎನ್.ಎಚ್. ಕೋನರಡ್ಡಿ, ಶಾಸಕ