ಕಾಡಾನೆಗಳ ಹಾವಳಿ, ಸಿಸಿಎಫ್ ಕಚೇರಿ ಎದುರು ಮಲೆನಾಡು ಪ್ರದೇಶದ ರೈತರ ಪ್ರತಿಭಟನೆ

farmers protest
ಕಾಡಾನೆಗಳ ದಾಳಿ ತಪ್ಪಿಸುವಂತೆ ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಶಿವಮೊಗ್ಗ ಸಿಸಿಎಫ್ ಕಚೇರಿ ಎದುರು ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ ಮಾತನಾಡಿದರು. ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಟಿ.ಡಿ.ಮೇಘರಾಜ್, ಬಿ.ಸ್ವಾಮಿರಾವ್, ಎಸ್.ದತ್ತಾತ್ರಿ ಇದ್ದರು.
Published on

ಶಿವಮೊಗ್ಗ: ಶಿವಮೊಗ್ಗ, ಹೊಸನಗರ, ಸಾಗರ ಸೇರಿ ಜಿಲ್ಲೆಯ ಹಲವೆಡೆ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಮಲೆನಾಡು ಪ್ರದೇಶದ ರೈತರು ಶುಕ್ರವಾರ ಹೊಳೆಹೊನ್ನೂರು ರಸ್ತೆ ಶ್ರೀಗಂಧ ಕೋಠಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಅತಿವೃಷ್ಟಿ, ಅನಾವೃಷ್ಟಿ ನಡುವೆಯೂ ಸಾಲಸೋಲ ಮಾಡಿ ಬೆಳೆದಿರುವ ಬೆಳೆಗಳನ್ನೂ ಕಾಡಾನೆಗಳು ನಾಶಪಡಿಸುತ್ತಿವೆ. ಬೆಳೆ ಹಾನಿ ಜತೆಗೆ ಜೀವ ಹಾನಿಯೂ ಆಗಿದೆ. ಆದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಕಾಡಾನೆಗಳ ಸ್ಥಳಾಂತರ ಮಾಡುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷೃತನ ತೋರುತ್ತಿದೆ. ಹತ್ತು ಹಲವು ಬಾರಿ ಮನವಿ ಸಲ್ಲಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಇದೇ ವರ್ತನೆ ಮುಂದುವರಿದರೆ ಅಧಿಕಾರಿಗಳೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಮೃತ ತಿಮ್ಮಪ್ಪ ಅವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿಯೂ ಎರಡು ತಿಂಗಳ ವಿಳಂಬ ಮಾಡಲಾಯಿತು. ಕಣ್ಣಿದ್ದರೂ ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ತಕ್ಷಣವೇ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಕಾಡು ಪ್ರಾಣಿಗಳ ಸ್ಥಳಾಂತರಕ್ಕೆ ಸ್ಪಷ್ಟ ನಿರ್ಧಾರ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಆರಗ ಜ್ಞಾನೇಂದ್ರ, ಎಂಎಲ್‌ಸಿ ಡಿ.ಎಸ್.ಅರುಣ್, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಕೆ.ಬಿ.ಅಶೋಕನಾಯ್ಕ್, ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ, ಕೆ.ಆರ್.ರಾಜು, ಎಂ.ಬಿ.ಹರಿಕೃಷ್ಣ, ದಿವಾಕರ್ ಬೆಳ್ಳೂರು, ಹುನುಗೋಡು ರತ್ನಾಕರ್, ವೀರೇಶ್, ತಮ್ಮಡಿಹಳ್ಳಿ ನಾಗರಾಜ್, ಸುಮಲತಾ ಭೂಪಾಳಂ, ವಿನ್ಸಂಟ್ ರೋಡ್ರಿಗಸ್, ದೇವರಾಜ್ ಮಂಡೇನಕೊಪ್ಪ, ರವಿ ಗೌರಮಪುರ, ಗಣೇಶ್ ಬಿಳಿಕಿ, ಮುರುಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net