

ಹುಬ್ಬಳ್ಳಿ: ತಾಲೂಕಿನ ಗಾಮನಗಟ್ಟಿಯ "ಬಡವ ಸಾಕಿದ ಬಂಗಾರ' ಖ್ಯಾತಿಯ ಗಣೇಶ ಎಂಬ ಹೋರಿಯು ಸತತ ಮೂರನೇ ಬಾರಿ ಬೂದನಗುಡ್ಡ ಏರುವ ಮೂಲಕ ದಾಖಲೆ ಬರೆದಿದೆ.
ಗಾಮನಗಟ್ಟಿಯ ಅಂಗಡಿಯವರ ಮನೆತನದ ಗಣೇಶ ಹೋರಿಯು ಕಲಘಟಗಿ ತಾಲೂಕಿನ ಬೂದನಗುಡ್ಡವನ್ನು ಮೂರು ಸಲ ಹತ್ತಿ ಸಾಧನೆ ಮಾಡಿದೆ.
ಮೊದಲ ವರ್ಷ ಗಣೇಶ ಮತ್ತು ನವಲ್ಯಾ ಎಂಬ ಎರಡು ಹೋರಿಗಳು ಬೂದನಗುಡ್ಡ ಏರಿದ್ದವು. ಎರಡನೇ ವರ್ಷವೂ ಮತ್ತೆ ಈ ಎರಡೂ ಹೋರಿಗಳು ಕಟ್ಟಿಗೆ ಚಕ್ಕಡಿ, ಒಂದು ಕಬ್ಬಿಣದ ಚಕ್ಕಡಿ ಹಾಗೂ ಒಂದು ಕ್ವಿಂಟಾಲ್ ಹುರಳಿ ಕಾಳಿನ ಚೀಲದೊಂದಿಗೆ ಬೂದನಗುಡ್ಡ ಹತ್ತಿದ್ದವು.
ಆದರೆ, ನವಲ್ಯಾ ಹೋರಿ ನಿಧನದ ನಂತರ ಮೂರನೇ ವರ್ಷ ಗಣೇಶ ಹೋರಿಯು ತಾನೊಂದೇ ನಾಲ್ಕು ಚಕ್ಕಡಿಯೊಂದಿಗೆ ಬೂದನಗುಡ್ಡ ಹತ್ತುವ ಮೂಲಕ ಕ್ಷೇತ್ರದ ಜಾತ್ರೆಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಗಾಮನಗಟ್ಟಿ ಗ್ರಾಮಕ್ಕೆ ಹೆಸರು ತಂದು ಕೊಟ್ಟಿದೆ.
ಹೋರಿಯು ದಾಖಲೆ ಮಾಡಲು ಸಹಕರಿಸಿದ ಗಾಮನಗಟ್ಟಿ ಗ್ರಾಮದ ಗುರು ಹಿರಿಯರು, ನವನಗರದ ಅಪ್ಪಾಜಿ ಜನಸೇವಾ ಟ್ರಸ್ಟ್ ಹಾಗೂ ಅಭಿಮಾನಿ ಬಳಗದವರಿಗೆ ಹೋರಿ ಮಾಲೀಕರಾದ ಕರಿಯಪ್ಪ ಬಸಪ್ಪ ಅಂಗಡಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.