

ಮಡಿಕೇರಿ:
ಕೊಡಗಿನ ಪ್ರಯೋಗಶೀಲ ಕೃಷಿಕರು ಮೊದಲಿನಿಂದಲೂ ಕಾಫಿ ಜತೆಯಲ್ಲೇ ಇತರ ಮಿಶ್ರ ಬೆಳೆ ಬೆಳೆಯುವುದರತ್ತಲೂ ಆಸಕ್ತಿ ತೋರಿಸಿಕೊಂಡು ಬಂದಿದ್ದಾರೆ. ಕೇವಲ ಕಾಫಿ ಮಾತ್ರ ನಂಬಿಕೊಂಡರೆ ತೋಟದ ನಿರ್ವಹಣೆ ಸಾಧ್ಯವಿಲ್ಲ ಎಂದು ಮನಗಂಡಿರುವ ಬೆಳೆಗಾರರು ಇತರ ಹಣ್ಣಿನ ಬೆಳೆಗಳನ್ನೂ ತಮ್ಮ ತೋಟದಲ್ಲಿ ಬೆಳೆಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದೇಶಿ ತಳಿಯ ಅಧಿಕ ಮೌಲ್ಯದ ಹಣ್ಣಿನ ಕೃಷಿಯೂ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದಕ್ಕೊಂದು ಕ್ರಮಬದ್ಧತೆಯ ಚೌಕಟ್ಟು ಹಾಕಲು ಜಿಲ್ಲೆಯಲ್ಲಿ ಈಗ ಸೊಸೈಟಿ ಫಾರ್ ಪ್ರಮೋಷನ್ ಆಫ್ ಹೈ ವ್ಯಾಲ್ಯೂ ಎಕ್ಸೊಟಿಕ್ ಹಾರ್ಟಿಕಲ್ಚರಲ್ ಕ್ರಾಪ್ಸ್ (ಎಸ್‌ಪಿಹೆಚ್‌ಇಹೆಚ್‌ಸಿ) ಅಸ್ತಿತ್ವಕ್ಕೆ ತರಲಾಗಿದೆ.
ಮಲೆನಾಡಿನ ಮಡಿಲಲ್ಲಿ ಇರುವ ಕೊಡಗು ವಿಶಿಷ್ಟ ಹವಾಮಾನವನ್ನೂ ಹೊಂದಿದೆ. ಭಾರತದ ಸ್ವಿಡ್ಜರ್‌ಲ್ಯಾಂಡ್ ಎಂದೇ ಕರೆಯಲಾಗುವ ಜಿಲ್ಲೆಯ ವಿಸ್ತೀರ್ಣ ಚಿಕ್ಕದಾದರೂ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ವಾತಾವರಣ ಕಾಣಬಹುದಾಗಿದೆ. ಭಾಗಮಂಡಲದಂತಹ ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ರಾಜ್ಯದಲ್ಲೇ ಹೆಚ್ಚಿನ ಮಳೆ ಸುರಿದರೆ ಕುಶಾಲನಗರ ತಾಲೂಕಿನ ವ್ಯಾಪ್ತಿಯಲ್ಲಿ ಮೈಸೂರು ಮತ್ತು ಹಾಸನ ಜಿಲ್ಲೆಗಳ ಹವಾಗುಣ ಕಂಡುಬರುತ್ತದೆ. ಹಾಗಾಗಿ ಕೊಡಗು ವಿದೇಶಿ ಹಣ್ಣುಗಳನ್ನು ಬೆಳೆಯಲು ಸೂಕ್ತವಾದ ಪ್ರದೇಶ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ವಿದೇಶಿ ಹಣ್ಣಾದ ಬಟರ್‌ಫ್ರೂಟ್ ಅನ್ನು ಸ್ವಾತಂತ್ರ್ಯಪೂರ್ವದಲ್ಲೇ ಕೊಡಗಿನಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಆಗ ಇದರಲ್ಲಿರುವ ಆರೋಗ್ಯಕ್ಕೆ ಪೂರಕ ಅಂಶಗಳು ಯಾರಿಗೂ ಗೊತ್ತಿರಲಿಲ್ಲ. ಹಣ್ಣು ಎಂದರೆ ಒಂದು ನಿರ್ದಿಷ್ಟ ರುಚಿ ಇರಬೇಕೆಂದು ನಂಬಿದ್ದ ಸಮಯದಲ್ಲಿ ಯಾವುದೇ ರುಚಿ ಇಲ್ಲದ ಬಟರ್‌ಫ್ರೂಟ್ ಯಾರಿಗೂ ಬೇಡವಾಗಿತ್ತು. ತೋಟಗಳಲ್ಲಿ ಬಿದ್ದಿರುತ್ತಿದ್ದ ಈ ಹಣ್ಣು ನಾಯಿ ಸೇರಿದಂತೆ ಪ್ರಾಣಿಗಳ ಪಾಲಾಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಬಟರ್‌ಫ್ರೂಟ್‌ನ ಮಾರುಕಟ್ಟೆ ಮೌಲ್ಯ ಅರಿವಿಗೆ ಬಂದ ನಂತರ ಈಗ ಜಿಲ್ಲೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಆರಂಭವಾಗಿದೆ.
ಕ್ರಿಸ್ಮಸ್ ಸಂದರ್ಭದಲ್ಲಿ ಲಿಚ್ಚಿ ಹಣ್ಣಿಗೆ ವಿದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಕಂಡು ಬರುತ್ತದೆ. ಆದರೆ ಅಲ್ಲಿ ಈ ಅವಧಿಯಲ್ಲಿ ಲಿಚ್ಚಿ ಹಣ್ಣು ದೊರೆಯುವುದಿಲ್ಲ. ಮತ್ತೊಂದು ಕಡೆ ಈ ಋತುವಿನಲ್ಲಿ ಕೊಡಗು, ಚಿಕ್ಕಮಗಳೂರು ಹಾಗೂ ವೈನಾಡಿನಲ್ಲಿ ಆಫ್‌ಸೀಸನ್ ಲಿಚ್ಚಿ ಹಣ್ಣು ಬೆಳೆಯುತ್ತದೆ. ಇದನ್ನು ಅರಿತುಕೊಂಡಿರುವ ಬೆಳೆಗಾರರು ಇತ್ತೀಚಿನ ವರ್ಷಗಲ್ಲಿ ಈ ಭಾಗಗಳಲ್ಲಿ ಲಿಚ್ಚಿ ಹಣ್ಣಿನ ಬೇಸಾಯ ಮಾಡುತ್ತಿದ್ದಾರೆ. ವಿದೇಶದಲ್ಲಿ ಬೇಡಿಕೆ ಇದೆ ಎನ್ನುವುದು ಇವರಿಗೆ ಗೊತ್ತಿದ್ದರೂ ಹೇಗೆ ಮಾರುಕಟ್ಟೆಗೆ ತಲುಪಿಸಬೇಕು ಎನ್ನುವುದರ ಮಾಹಿತಿ ಕೊರತೆ ಇದೆ.
ಬಟರ್‌ಫ್ರೂಟ್ ಮತ್ತು ಲಿಚ್ಚಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸ್ಥಳೀಯ ಕೃಷಿಕರು ಆಸಕ್ತಿ ತೋರಿಸಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ಇದರ ಜತೆಯಲ್ಲಿ ರ‌್ಯಾಂಬುಟನ್, ಮ್ಯಾಂಗೊಸ್ಟಿನ್‌ನಂತಹ ವಿದೇಶಿ ತಳಿಯ ಅಧಿಕ ಮೌಲ್ಯದ ಹಣ್ಣಿನ ಕೃಷಿಯೂ ಜಿಲ್ಲೆಯಲ್ಲಿ ನಡೆಯುತ್ತಿದೆ. ಆದರೆ ಈ ಹಣ್ಣುಗಳನ್ನು ಬೆಳೆಯುತ್ತಿರುವವರು ಸಂಘಟಿತರಾಗಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿರುವ ಬೇಡಿಕೆಯ ಅರಿವು ಮತ್ತು ಮಾರುಕಟ್ಟೆಗೆ ತಲುಪಿಸುವ ಮಾರ್ಗ ಹೆಚ್ಚಿನ ಬೆಳೆಗಾರರಿಗೆ ಗೊತ್ತಿಲ್ಲದೆ ತಾವು ಬೆಳೆದ ಹಣ್ಣುಗಳನ್ನು ಮಾರ್ಕೇಟಿಂಗ್ ಮಾಡುವಲ್ಲಿ ವಿಫಲರಾಗಿದ್ದಾರೆ.
ಶನಿವಾರ (ಜೂ.೧೫) ಅಧಿಕೃತವಾಗಿ ಆರಂಭವಾಗಿರುವ ಸೊಸೈಟಿ ಫಾರ್ ಪ್ರಮೋಷನ್ ಆಫ್ ಹೈ ವ್ಯಾಲ್ಯೂ ಎಕ್ಸೊಟಿಕ್ ಹಾರ್ಟಿಕಲ್ಚರಲ್ ಕ್ರಾಪ್ಸ್ ಸಂಘ ವಿದೇಶಿ ತಳಿಯ ಅಧಿಕ ಮೌಲ್ಯದ ಹಣ್ಣುಗಳನ್ನು ಬೆಳೆಯುವವರಿಗೆ ಎಲ್ಲಾ ರೀತಿಯ ಸಹಕಾರ ಕೊಡಲು ಸಜ್ಜಾಗಿದೆ. ಈ ಸಂಘವನ್ನು ವಿಜ್ಞಾನಿಗಳು ಮತ್ತು ರೈತರನ್ನು ಒಳಗೊಂಡು ೧೧ ಸ್ಥಾಪಕ ಸದಸ್ಯರೊಂದಿಗೆ ಮಾರ್ಚ್ ೨೦ರಂದು ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ ೧೯೬೦ರ ಅಡಿಯಲ್ಲಿ ನೋಂದಾಯಿಸಲಾಗಿದ್ದು, ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕಾರ್ಯರಂಭ ಮಾಡಿದೆ.
ವಿದೇಶಿ ತಳಿಯ ಅಧಿಕ ಮೌಲ್ಯದ ಹಣ್ಣುಗಳ ಬೆಳೆಗಳನ್ನು ಬೆಳೆಯುವಂತೆ ಉತ್ತೇಜಿಸಲು ಮತ್ತು ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು, ತೋಟಗಾರಿಕೆಯಲ್ಲಿ ವೈಜ್ಞಾನಿಕ ತತ್ವಗಳು ಮತ್ತು ವ್ಯವಸಾಯ ಪದ್ಧತಿಯನ್ನು ಕೃಷಿಕರಿಗೆ ಅಭ್ಯಾಸ ಮಾಡಿಸುವ ಗುರಿಯನ್ನು ಈ ಸಂಘ ಹೊಂದಿದೆ. ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಯ ವ್ಯಾಪಾರ ನಿಯಂತ್ರಣದಲ್ಲಿ ಪಾಲುದಾರರಾಗಿರುವ ಸರ್ಕಾರ ಮತ್ತು ಉದ್ಯಮ ಸಂಸ್ಥೆಗಳಿಗೆ ಈ ಸಂಘ ವೈಜ್ಞಾನಿಕ ಮತ್ತು ತಾಂತ್ರಿಕ ಸಲಹೆಯನ್ನೂ ಕೊಡುತ್ತದೆ.
ಈ ಸಂಘವು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಹಾರ್ಟಿಕಲ್ಚರಲ್ ಸೈನ್ಸ್ ಮತ್ತು ಇತರ ಸಂಬಂಧಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿಕೊಳ್ಳುವಂತೆಯೂ ನೋಡಿಕೊಳ್ಳಲಾಗುತ್ತದೆ. ಆಗಾಗ್ಗೆ ಸಭೆಗಳು, ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳಲ್ಲಿನ ಪ್ರಸ್ತುತ ಬೆಳವಣಿಗೆಗಳ ವಿನಿಮಯ, ಚರ್ಚೆ ಮತ್ತು ಮಾಹಿತಿ ಹರಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಹೆಚ್ಚುವರಿಯಾಗಿ ಸಂಘವು ಈ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಅವಕಾಶಗಳಿಗೆ ಸಂಬಂಧಿಸಿದಂತೆ ಕ್ಯಾಟಲಾಗ್‌ಗಳು, ಪುಸ್ತಕಗಳು, ಮೊನೊಗ್ರಾಫ್‌ಗಳು ಸೇರಿದಂತೆ ಬೆಳೆಗಾರರ ಅಭಿವೃದ್ಧಿಗೆ ಪೂರಕವಾದ ಸರಕುಗಳನ್ನು ಒದಗಿಸುವ ಕೆಲಸ ಮಾಡುತ್ತದೆ. ಇದಕ್ಕಾಗಿ ದೇಣಿಗೆ, ಚಂದಾ ಸೇರಿ ವಿವಿಧ ವಿಧಾನಗಳ ಮೂಲಕ ಆರ್ಥಿಕ ಮೂಲವನ್ನು ಕಂಡುಕೊಳ್ಳಲು ಸಂಸ್ಥೆ ನಿರ್ಧರಿಸಿದೆ. ಕಾರ್ಯಕಾರಿ ಮಂಡಳಿಯ ತೀರ್ಮಾನದಂತೆ ಹಣಕಾಸಿನ ನಿರ್ವಹಣೆಯನ್ನು ನಡೆಸಲಾಗುತ್ತದೆ. ಈ ಸಂಘಕ್ಕೆ ೩೦೦ ಜನ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ.
ಅಧಿಕ ಮೌಲ್ಯದ ವಿದೇಶಿ ಹಣ್ಣುಗಳನ್ನು ಬೆಳೆಯುವ ರೈತರಿಗೆ ಈ ಸಂಘದ ಮೂಲಕ ಉತ್ತಮ ಗುಣಮಟ್ಟದ ಮತ್ತು ಉತ್ತಮ ತಳಿಯ ಗಿಡ ನೀಡುವುದು, ಹಣ್ಣಿನ ಗಿಡ ಬೆಳೆಸಲು ತರಬೇತಿ, ಗಿಡಗಳ ಉತ್ಪಾದನೆ ತರಬೇತಿ, ಕೃಷಿ ಪರಿಕರಗಳು, ಔಷಧಿಗಳ ಪೂರೈಕೆ, ಹಣ್ಣಿನ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಂಹ ಈ ಸಂಘ ನೆರವಾಗಲಿದೆ.
ಹಣ್ಣಿನ ಮಾರಾಟದ ವೇಳೆ ದಲ್ಲಾಳಿಗಳ ಹಾವಳಿಯಿಂದ ಮಾರುಕಟ್ಟೆಯಲ್ಲಿನ ಬೆಲೆಯ ಲಾಭ ಬೆಳೆಗಾರರಿಗೆ ಸಿಗುತ್ತಿಲ್ಲ. ಹಾಗಾಗಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವ ಮೂಲಕ ಬೆಳೆಗಾರರಿಗೆ ನ್ಯಾಯಯುತ ಆದಾಯ ದೊರಕಿಸಿಕೊಡಲು ಸಹ ಈ ಸಂಘ ಸಹಕಾರ ಕೊಡಲಿದೆ. ಕೊಡಗು ಮಾತ್ರವಲ್ಲದೆ ಇತರ ಕಡೆಯಲ್ಲಿರುವ ಇಂಥ ಹಣ್ಣಿನ ಬೆಳೆಗಾರರನ್ನೂ ಸದಸ್ಯರಾಗಿ ಸಂಘಕ್ಕೆ ಸೇರಿಸಿಕೊಳ್ಳಲಾಗುವುದು.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಂಘಕ್ಕೆ ಭಾರತೀಯ ತೋಟಗಾರಿಕಾ ಸಂಸ್ಥೆಯ ನಿರ್ದೇಶಕರು ಅಧ್ಯಕ್ಷರಾಗಿರುತ್ತಾರೆ. ನವ ದೆಹಲಿಯ ಭಾರತೀಯ ಕೃಷಿ ಅನುಸಂಧಾನ್ ಪರಿಷತ್‌ನಲ್ಲಿ ತೋಟಗಾರಿಕೆ ವಿಜ್ಞಾನ ವಿಭಾಗದಲ್ಲಿ ಉಪ ಮಹಾ ನಿರ್ದೇಶಕರಾಗಿರುವ ಡಾ. ಎಸ್.ಕೆ. ಸಿಂಗ್ ಈ ಸಂಘಕ್ಕೆ ೧.೧೦ ಲಕ್ಷ ರೂ. ವೈಯಕ್ತಿ ದೇಣಿಗೆ ನೀಡುವ ಮೂಲಕ ಪ್ರೋತ್ಸಾಹ ಕೊಟ್ಟಿದ್ದಾರೆ.
ಸೊಸೈಟಿ ಫಾರ್ ಪ್ರಮೋಷನ್ ಆಫ್ ಹೈ ವ್ಯಾಲ್ಯೂ ಎಕ್ಸೊಟಿಕ್ ಹಾರ್ಟಿಕಲ್ಚರಲ್ ಕ್ರಾಪ್ಸ್ (ಎಸ್‌ಪಿಹೆಚ್‌ಇಹೆಚ್‌ಸಿ) ಸಂಘವನ್ನು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವತಿಯಿಂದಲೇ ಆರಂಭಿಸಲಾಗಿದೆ. ಅಧಿಕ ಮೌಲ್ಯದ ವಿದೇಶಿ ಹಣ್ಣುಗಳನ್ನು ಬೆಳೆಯಲು ಉತ್ತೇಜನ ನೀಡುವುದು ಮತ್ತು ಈ ಕೃಷಿ ಬಗ್ಗೆ ಮಾಹಿತಿ ನೀಡುವುದು ಸಂಘ ರಚನೆಯ ಪ್ರಮುಖ ಉದ್ದೇಶವಾಗಿದೆ. ಇಂಥ ಹಣ್ಣುಗಳನ್ನು ಬೆಳೆಯುತ್ತಿರುವ ಬೆಳೆಗಾರರು ಸಂಘದ ಸದಸ್ಯತ್ವ ಪಡೆಯಬಹುದು.
ಡಾ. ಬಿ.ಎಂ. ಮುರಳೀಧರ, ವಿಜ್ಞಾನಿ, ಹಣ್ಣಿನ ವಿಭಾಗ, ಕೇಂದ್ರೀಯ ತರೋಟಗಾಕೆ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿ
ಕೊಡಗು ಮಾತ್ರವಲ್ಲದೆ ಅಧಿಕ ಮೌಲ್ಯದ ವಿದೇಶಿ ಹಣ್ಣುಗಳನ್ನು ಬೆಳೆಯುತ್ತಿರುವ ಪ್ರದೇಶಗಳ ಬೆಳೆಗಾರರ ಅನುಕೂಲಕ್ಕಾಗಿ ಸೊಸೈಟಿ ಫಾರ್ ಪ್ರಮೋಷನ್ ಆಫ್ ಹೈ ವ್ಯಾಲ್ಯೂ ಎಕ್ಸೊಟಿಕ್ ಹಾರ್ಟಿಕಲ್ಚರಲ್ ಕ್ರಾಪ್ಸ್ (ಎಸ್‌ಪಿಹೆಚ್‌ಇಹೆಚ್‌ಸಿ) ಸಂಘ ಸ್ಥಾಪಿಸಲಾಗಿದೆ. ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಆಗುತ್ತಿರುವ ಮೋಸ ತಪ್ಪಿಸುವುದು, ವೈಜ್ಞಾನಿಕ ರೀತಿಯಲ್ಲಿ ಗುಣಮಟ್ಟದ ಹಣ್ಣುಗಳನ್ನು ಬೆಳೆಯಲು ಮಾರ್ಗದರ್ಶನ ನೀಡುವುದು ಈ ಸಂಘ ಸ್ಥಾಪನೆಯ ಪ್ರಮುಖ ಉದ್ದೇಶವಾಗಿದೆ.
ಡಾ. ರಾಜೀಂದ್ರನ್ ಎಸ್., ನಿರ್ದೇಶಕ, ತೋಟಗಾರಿಕೆ ಬೆಳೆಗಳ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿ