

ತ್ಯಾಮಗೊಂಡ್ಲು: ರೈತರ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಮತ್ತು ಕೆಐಎಡಿಬಿ ವಿರುದ್ಧ ರೈತರು ಒಗ್ಗಟ್ಟಿನಿಂದ ಹೋರಾಡುವ ಕಾಲ ಬಂದಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಕರೆ ನೀಡಿದರು.
ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಹೋಬಳಿಯ ಗಡಿ ಗ್ರಾಮ ಬಳ್ಳಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಐಎಡಿಬಿ ವಿರುದ್ಧದ ರೈತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಬ್ರಿಟಿಷ್ ನೀತಿ ಅನುಸರಿಸುತ್ತಿದೆ. ಬಳ್ಳಗೆರೆ ಗ್ರಾಮದಲ್ಲೇ 500 ಎಕರೆ ಫಲವತ್ತಾದ ಜಮೀನು ವಶಪಡಿಸಿಕೊಳ್ಳಲು ಸರ್ಕಾರದ ಏಜೆಂಟ್ ಕೆಐಎಡಿಬಿ ಮುಂದಾಗಿದೆ, ಮಾರುಕಟ್ಟೆ ಮೌಲ್ಯ ಹೆಚ್ಚಿದ್ದರೂ ಕಡಿಮೆ ಬೆಲೆಗೆ ಜಮೀನು ಪಡೆದುಕೊಳ್ಳಲು ಮುಂದಾಗಿದೆ, ನಾನು ಕೈಗಾರಿಕೆ ವಿರೋಧಿಯಲ್ಲ. ಆದರೆ, ಕೈಗಾರಿಕೆಯು ಕೃಷಿಗೆ ಪೂರಕವಾಗಿ ಕೆಲಸ ಮಾಡಿ ಕೃಷಿ ಮತ್ತು ಕೈಗಾರಿಕೆ ಜತೆಜತೆಯಾಗಿ ಅಭಿವೃದ್ಧಿಯಾದಾಗ ರಾಜ್ಯ, ದೇಶ ಅಭಿವೃದ್ಧಿಯಾಗುತ್ತದೆ ಎಂದರು.
ಕೈಗಾರಿಕೆಗಳು ಒಂದೇ ಕಡೆ ಇದ್ದರೆ ಅದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಪರಿಸರ ಮಾಲಿನ್ಯ ನಿಯಂತ್ರಿಸಲು ಅನುಕೂಲವಾಗುತ್ತದೆ, ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ. ಆದರೆ ಬೆಂಗಳೂರು ಎಂಬ ಹೆಸರನ್ನು ಬ್ರ್ಯಾಂಡ್ ಮಾಡಿಕೊಂಡರೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಬಹುದು ಎಂಬ ಭ್ರಮೆ ಬೆಳೆಸಿಕೊಂಡಿರುವ ಸರ್ಕಾರವು, ನಗರ ಹೊರ ವಲಯದಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರ ಬದುಕಿಗೆ ಕೊಳ್ಳಿ ಇಟ್ಟು ಅವರ ಜೀವನಾಧಾರವಾದ ಜಮೀನುಗಳನ್ನು ಕಿತ್ತುಕೊಳ್ಳುತ್ತಿದೆ. ಜತೆಗೆ ಪರಿಸರ ಮಾಲಿನ್ಯಕ್ಕೂ ನಾಂದಿ ಹಾಡುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ವಿ.ನಾಗರಾಜ್, ಸಪ್ತಗಿರಿ ಶಂಕರ್‌ನಾಯಕ್, ಟಿ.ಎನ್.ಹನುಮಂತರಾಜು, ರಂಗನಾಥ್‌ಬಾಬು, ಗುರುಪ್ರಕಾಶ್, ಬಳ್ಳಗೆರೆ ಪ್ರಕಾಶ್, ಪುಟ್ಟಸ್ವಾಮಿ, ಭೃಂಗೇಶ್, ಗುಬ್ಬಣ್ಣಸ್ವಾಮಿ, ಸತೀಶ್, ಹೆಚ್.ಕೆ.ರವೀಶ್, ಬಿ.ಎಂ.ಶ್ರೀನಿವಾಸ್, ಚನ್ನಪ್ಪ, ನಾರಾಯಣಸ್ವಾಮಿ, ರಂಗಸ್ವಾಮಿ, ಚನ್ನೇಗೌಡ, ಮಂಜುನಾಥ್ ಇದ್ದರು.
ಜಮೀನು ಸ್ವಾಧೀನವೇ ಮಾಫಿಯಾ
ಅವಶ್ಯಕತೆ ಇಲ್ಲದಿದ್ದರೂ ಸರ್ಕಾರ ಕೃಷಿ ಭೂಮಿ ಸ್ವಾಧೀನ ಮಾಡುತ್ತಿದೆ, ಹತ್ತಾರು ವರ್ಷಗಳಿಂದ ಸ್ವಾಧೀನಪಡಿಸಿಕೊಂಡ ಜಮೀನಿನ ಕೆಲವೇ ಭಾಗ ಅಭಿವೃದ್ಧಿಪಡಿಸಿದ್ದಾರೆ, ಇನ್ನು ಅದರಲ್ಲಿ 2 ಲಕ್ಷ ಎಕರೆಯಷ್ಟು ಜಮೀನು ಅಭಿವೃದ್ಧಿಯಾಗದೆ ಉಳಿದಿದೆ, ಬೇರೆ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಮುನ್ನ ಆ ಜಮೀನನ್ನು ಅಭಿವೃದ್ಧಿಪಡಿಸಿ ಕೈಗಾರಿಕೆಗೆ ನೀಡಬಹುದು ಎಂದು ಡಾ.ಕೆ.ಸುಧಾಕರ್ ಹೇಳಿದರು.
ಜಮೀನು ಸ್ವಾಧೀನವೇ ಮಾಫಿಯಾವಾಗಿದ್ದು, ಈ ವ್ಯವಸ್ಥೆ ವಿರುದ್ಧ ಇಡೀ ರಾಜ್ಯದಲ್ಲಿ ಧ್ವನಿ ಎತ್ತಬೇಕಾಗಿದೆ. ಭೂ ಸ್ವಾಧೀನದ ಮಾಹಿತಿ ಕಲೆ ಹಾಕುವ ಅಧಿಕಾರಿಗಳೇ ಆ ಜಾಗದಲ್ಲಿ ಬೇನಾಮಿಯಾಗಿ ಕಡಿಮೆ ಬೆಲೆಗೆ ಕೃಷಿ ಭೂಮಿ ಖರೀದಿ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ ಎಂದು ದೂರಿದರು.
ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿದೆ, ಕೈಗಾರಿಕಾ ಇಲಾಖೆಯಲ್ಲಿನ ಅವ್ಯವಹಾರದ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.
ಸಿಎಂ ಕುರ್ಚಿಗೆ ಟವಲ್
ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಪ್ರತಿ ಪಕ್ಷಗಳು ಕೇಳುವುದಕ್ಕಿಂತ ಮುನ್ನವೇ ಅವರದೇ ಪಕ್ಷದವರು ಮುಖ್ಯಮಂತ್ರಿ ಕುರ್ಚಿಗೆ ಟವಲ್ ಹಾಕುತ್ತಿದ್ದಾರೆ. ಸಿಎಂ ಎದುರು ಪೂರ್ಣಾವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಹೇಳುವವರು, ಸಂಜೆ ಹೊತ್ತಿಗೆ ಸಿಎಂ ವಿರುದ್ಧ ಸಭೆ ನಡೆಸುತ್ತಿದ್ದಾರೆ ಎಂದು ಡಾ.ಕೆ.ಸುಧಾಕರ್ ಕುಟುಕಿದರು. ಮುಡಾ ಹಗರಣ ಹಾಗೂ ನಾಗಮಂಗಲ ಕೋಮು ಗಲಭೆ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ಸರ್ಕಾರ ಒಂದು ಕೋಮಿಗೆ ಬಹಿರಂಗವಾಗಿ ಬೆಂಬಲ ನೀಡಿ ಅವರ ದುಷ್ಕೃತ್ಯಕ್ಕೆ ಮೃಧು ಧೋರಣೆ ತಳೆದಾಗ ನಾಗಮಂಗದಲ್ಲಿ ನಡೆದಂತಹ ಘಟನೆಗಳಾಗುತ್ತವೆ. ತಪ್ಪಿತಸ್ಥರು ಯಾರೇ ಆದರೂ ಕಠಿಣ ಕ್ರಮ ಕೈಗೊಂಡದ್ದರೆ ಈ ರೀತಿ ಸಮಸ್ಯೆ ಆಗುತ್ತಿರಲಿಲ್ಲ ಎಂದರು.
"ಬಳ್ಳಗೆರೆಗೆ ಸಮರ್ಪಕ ರಸ್ತೆ ಸಂಪರ್ಕ ಇಲ್ಲ, ಕೆಐಎಡಿಬಿ ರೈತರ ಭೂಮಿ ಸ್ವಾಧೀನಕ್ಕೆ ಮುಂದಾಗಿ ಒಕ್ಕಲೆಬ್ಬಿಸುವುದಕ್ಕೆ ಮುಂದಾಗಿರುವುದನ್ನು ನಾವೆಲ್ಲ ವಿರೋಧಿಸುತ್ತೇವೆ. ನಮ್ಮ ಭಾಗದಲ್ಲಿನ ರೈತರು ದಿನಕ್ಕೆ ಸುಮಾರು 4000 ಲೀಟರ್ ಹಾಲು ಉತ್ಪಾದನೆ ಮಾಡುತ್ತಾರೆ. ಹೈನುಗಾರಿಕೆ ಮತ್ತು ವ್ಯವಸಾಯ ಮುಖ್ಯ ಕೆಲಸ ಮಾಡಿಕೊಂಡು ಇರುವ ರೈತರ ಜಮೀನು ಸ್ವಾಧೀನಕ್ಕೆ ಬಿಡುವುದಿಲ್ಲ. ಹೋರಾಟಕ್ಕೆ ಸಿದ್ಧರಿದ್ದೇವೆ."
ರಾಮಕೃಷ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ
"ಕೇಂದ್ರ ಸರ್ಕಾರ 4600 ಕೋಟಿ ರೂ. ಅನುದಾನದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಎಸ್‌ಕೆಟಿಆರ್‌ಆರ್ ರಸ್ತೆ ನಿರ್ಮಿಸಲು ಮಂಜೂರಾತಿ ನೀಡಿದೆ. ಮೋದಿ ಸರ್ಕಾರ ಬಂದ ಮೇಲೆ ರೈಲು, ಮೆಟ್ರೋ ರಸ್ತೆ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ."
ಡಾ.ಕೆ.ಸುಧಾಕರ್ ಸಂಸದ
ರೈತರ ಸಮಸ್ಯೆಯೇ ಬಂಡವಾಳ
ರೈತರ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಕೆಐಎಡಿಬಿ ಜಮೀನು ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಆಪಾದಿಸಿದರು. ಇದುವರೆಗೂ ಸುತ್ತಮುತ್ತ 5000 ಎಕರೆ ಸ್ವಾಧೀನ ಮಾಡಿಕೊಂಡು ಕೇವಲ 500 ಎಕರೆ ಅಭಿವೃದ್ಧಿ ಮಾಡಿದ್ದಾರೆ. 2000 ಸಂಸ್ಥೆಗಳು ಕೈಗಾರಿಕಾ ಉದ್ದೇಶಕ್ಕೆ ಪಡೆದ ಭೂಮಿಯಲ್ಲಿ ನಿರ್ಮಾಣದ ಕೆಲಸ ಪ್ರಾರಂಭ ಮಾಡಿಲ್ಲ. ಸ್ವಾಧೀನ ಪಡಿಸಿಕೊಂಡ ಜಮೀನಿನ ಪರಿಹಾರ ಮೊತ್ತ ಪಡೆಯಲು ರೈತರು ಕಷ್ಟ ಪಡಬೇಕಾಗಿದೆ. ಅಧಿಕಾರಿಗಳು ಕೇಳುವ ದಾಖಲೆ ಪಡೆಯಲು ಲಕ್ಷಾಂತರ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ತನ್ನ ಜಮೀನಿನಲ್ಲಿ ಬೆಳೆ ಬೆಳೆದುಕೊಂಡು ರಾಜನಂತೆ ಇದ್ದ ರೈತ ಜಮೀನು ಕಳೆದುಕೊಂಡು ದೈನೇಸಿಯಂತೆ ಇಲಾಖೆಯಿಂದ ಇಲಾಖೆಗೆ ಅಲೆಯಬೇಕಾದ ಸ್ಥಿತಿ ಬಂದಿದೆ ಎಂದು ಬೇಸರಿಸಿದರು.