ನಂಜನಗೂಡು: ಮೈಕ್ರೋ ಫೈನಾನ್ಸ್ ಅವರಿಂದ ಕಿರುಕುಳ ಕಂಡುಬಂದರೆ ನಮ್ಮನ್ನು ಸಂಪರ್ಕಿಸಿ, ನಿಮ್ಮೊಂದಿಗೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮನವಿ ಮಾಡಿದರು.
ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿ ಮಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ರೈತಚೇತನ ಪ್ರೊ.ನಂಜುಂಡಸ್ವಾಮಿ ಅವರ 89ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಲ್ಲಹಳ್ಳಿ ಗ್ರಾಮದಿಂದ ನಾವು ಇಡೀ ರಾಜ್ಯದ್ಯಂತ ಘೋಷಣೆ ಮಾಡುತ್ತಿದ್ದೇವೆ. ಮೈಕ್ರೋ ಫೈನಾನ್ಸ್ ಕಂಪನಿಗಳು ನಿಮ್ಮ ಗ್ರಾಮಕ್ಕೆ ಬಂದು ಕಿರುಕುಳ ನೀಡುತ್ತಿರುವ ಘಟನೆ ಕಂಡು ಬಂದಲ್ಲಿ ತಕ್ಷಣವೇ ನಮ್ಮನ್ನು ಸಂಪರ್ಕಿಸಿ. ಹಾಗೂ ಹೆಚ್ಚಿನ ಬಡ್ಡಿ ವಸೂಲಿ ಮಾಡುವ, ಬೆಳಗ್ಗೆ 900 ರೂ. ಕೊಟ್ಟು ಸಂಜೆ ಸಾವಿರ ರೂ. ವಸೂಲು ಮಾಡುತ್ತಿರುವ ಘಟನೆಗಳು ಕಂಡುಬರುತ್ತಿದ್ದಲ್ಲಿ ಇದಕ್ಕೆ ಕಡಿವಾಣ ಹಾಕಲಾಗುವುದು. ಇದೇ ನಂಜನಗೂಡು ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಸಾಲದಿಂದ ಬೇಸತ್ತು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಪ್ರತಿಭಟನೆಯನ್ನು ಮಾಡಿ, ಶಾಸಕರ ಮನವೊಲಿಸಿ ಮೃತಪಟ್ಟ ಕುಟುಂಬಕ್ಕೆ ಸ್ಥಳದಲ್ಲಿ 5 ಲಕ್ಷ ರೂ. ಪರಿಹಾರ ಕಲ್ಪಿಸಿ ಕೊಟ್ಟಿದ್ದೇವೆ. ಹಾಗೆ ತಿ.ನರಸೀಪುರದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ಬದಲಾಗಿ 15 ಲಕ್ಷ ರೂ. ಕೊಡಿಸಲಾಗಿದೆ. ಭೂ ಸುಧಾರಣೆ ಕಾಯ್ದೆ ವಿರುದ್ಧ ಹೋರಾಟ ಮಾಡಿರುವುದು ರಾಜ್ಯದಲ್ಲಿ ನಂಜನಗೂಡಿನಲ್ಲಿ ಮೊದಲು ಎಂದರು.
ನಂಜುಂಡಸ್ವಾಮಿ ಅವರು ತಮ್ಮ ಶ್ರಮ, ನಂಬಿಕೆ ಆದರ್ಶದಿಂದ ಬದುಕಿದರು. ಬಡವರು, ರೈತ ವರ್ಗದವರ ಅಧ್ಯಯನ ಮಾಡಿದರು. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದರು. ಬಡವರ ಸಮಸ್ಯೆಯನ್ನು ಬಗೆಹರಿಸಿ ಆದರ್ಶ ವ್ಯಕ್ತಿಯಾಗಿ ಸರಳ ಜೀವನ ನಡೆಸಿದರು ಎಂದು ಸ್ಮರಿಸಿದರು.
ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ರೈತ ನಾಯಕ ನಂಜುಂಡಸ್ವಾಮಿ ಅವರು ಸಮಾಜವಾದಿ ಚಳವಳಿ ಹಿನ್ನೆಲೆಯಿಂದ ಬಂದವರು. ಸಂವಿಧಾನ ಚೌಕಟ್ಟಿನಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಿದರು. ರೈತರ ಸಾಲ ಮನ್ನಾ ಬಗ್ಗೆ ಮೊದಲು ಧ್ವನಿ ಎತ್ತಿದವರು. ರೈತರಿಗೆ ಉಚಿತ ವಿದ್ಯುತ್ ಕೊಡಿಸಿದ್ದು, ಕಬ್ಬಿಗೆ ಬೆಂಬಲ ಬೆಲೆಗಾಗಿ ಮೊದಲು ಧ್ವನಿ ಎತ್ತಿದವರು ಎಂದರು.
ಕಾರ್ಯಕ್ರಮದಲ್ಲಿ ಇಮ್ಮಾವು ರಘು, ಸತೀಶ್, ಬಂಗಾರಸ್ವಾಮಿ, ಅಂಬಳೆ ರವಿ, ಮಲ್ಲಹಳ್ಳಿ ರವಿ, ಶಂಕರ್ ನಾಯ್ಕ, ಅಳಗಂಚಿ ದೊಡ್ಡಯ್ಯ, ಶ್ವೇತ ಮತ್ತಿತರರು ಇದ್ದರು.