ಬೆಳೆಹಾನಿ ಸಮೀಕ್ಷೆಗೆ ಅನ್ನದಾತರ ಅಪಸ್ವರ

oplus_131074
oplus_131074
Published on

ಮಡಿಕೇರಿ
ಜಿಲ್ಲೆಯಲ್ಲಿ ಕಳೆದ ವರ್ಷ ಅನಾವೃಷ್ಠಿಯಿಂದ ಕೃಷಿ ನಷ್ಟ ಸಂಭವಿಸಿದ್ದರೆ, ಈ ವರ್ಷ ಅತಿವೃಷ್ಠಿ ಕಾರಣದಿಂದ ರೈತರು, ಬೆಳೆಗಾರರು ಕೈ ಸುಟ್ಟುಕೊಳ್ಳುವಂತಾಗಿದೆ. ಕಾಫಿ, ಕರಿಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮತ್ತೊಂದು ಕಡೆ ಭತ್ತ ಕೃಷಿಯೂ ಮಳೆಯಿಂದಾಗಿ ಹಾನಿಗೊಳಗಾಗಿದೆ.
ಮಳೆಯಿಂದ ಆದ ನಷ್ಟಕ್ಕೆ ರೈತರು ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಶೇ. 33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದರೆ ಮಾತ್ರ ಪರಿಹಾರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿ ಮತ್ತು ಕೃಷಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಸರ್ವೇ ಕಾರ್ಯ ನಡೆದಿದೆ.
ಕೃಷಿ ಇಲಾಖೆ ವತಿಯಿಂದ ನಡೆಸಲಾದ ಜಂಟೀ ಸರ್ವೇ ಈಗಾಗಲೇ ಜಿಲ್ಲಾಧಿಕಾರಿ ಕೈ ಸೇರಿದೆ. ಇದರ ಪ್ರಕಾರ ಕೊಡಗಿನಲ್ಲಿ ಸುಮಾರು 32.426 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಮತ್ತು ಪ್ರವಾಹದಿಂದ ಭತ್ತ, ಮೆಕ್ಕೆ ಜೋಳದ ಬೆಳೆ ನಷ್ಟ ಆಗಿರುವುದಾಗಿ ವರದಿ ಸಲ್ಲಿಸಲಾಗಿದೆ. ಕಾಫಿ ಮಂಡಳಿ ವತಿಯಿಂದ ಸರ್ವೇ ಕಾರ್ಯ ಮುಂದುವರಿದಿದೆ.
ಸರ್ಕಾರದ ಈ ಸರ್ವೇ ಕಾರ್ಯದ ಬಗ್ಗೆ ರೈತರು ಮತ್ತು ಬೆಳೆಗಾರರು ಅತೃಪಿ ವ್ಯಕ್ತಪಡಿಸುತ್ತಿದ್ದಾರೆ. ಈ ಸಮೀಕ್ಷೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎನ್ನುವುದು ಅನ್ನದಾತರ ಆರೋಪ. ಈ ರೀತಿಯಲ್ಲಿ ಸಮೀಕ್ಷೆ ನಡೆಸುವುದರಿಂದ ಮಳೆಯಿಂದ ಹಾನಿಗೆ ಒಳಗಾದ ಬಹುತೇಕ ರೈತರಿಗೆ ಪರಿಹಾರ ಕೈ ತಪ್ಪಲಿದೆ ಎನ್ನುವ ಆತಂಕ ಕಾಣಿಸಿಕೊಂಡಿದೆ. ಈ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕಾಫಿ ಪಸಲು ಹಾನಿಯಿಂದ ಕಾಫಿ ಬೆಳೆಗಾರರು ತುಂಬಾ ಆರ್ಥಿಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಧಾರಾಕಾರ ಮುಂಗಾರು ಮಳೆಯಿಂದ ಶೇ. 50ರಿಂದ ಶೇ.65 ರಷ್ಟು ಕಾಫಿ ಫಸಲು ಹಾನಿಯಾಗಿದೆ. ವೈಜ್ಞಾನಿಕ ಸಮೀಕ್ಷೆ ಮಾಡಬೇಕು. ಕಾಫಿ ಗಿಡಗಳು ರೋಗಪೀಡಿತವಾಗಿದೆ. ಮುಂದಿನ ಸಾಲಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯನ್ನು ಬೆಳೆಗಾರರು ಮಾಡುವಂತಿಲ್ಲ. ಇವೆಲ್ಲ ಗಣನೆಗೆ ತೆಗೆದುಕೊಂಡು ಪ್ರತಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಕಾಫಿ ಬೆಳೆಗೆ ಸೂಕ್ತ ಸೌಲಭ್ಯ ಸರ್ಕಾರ ಒದಗಿಸದಿದ್ದರೆ ಕಿತ್ತಳೆಯಂತೆ ಕಾಫಿಯ ಅವಸಾನ ನೋಡಬೇಕಾಗುತ್ತದೆ.
ಸುಮಲತಾ ಪುರುಷೋತ್ತಮ್, ಕಾಫಿ ಬೆಳೆಗಾರರು, ತಲ್ತಾರೆಶೆಟ್ಟಳ್ಳಿ ಗ್ರಾಮ

ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಕಾಫಿಗೆ ಮಾರಕವಾದ ಮಳೆ ಸುರಿದಿದೆ. ಅದರಲ್ಲೂ ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಕಾಫಿ ಫಸಲಿಗೆ ಹಾನಿಯಾಗಿದೆ. ಮಳೆಗಾಲದಲ್ಲಿ ಶಾಂತಳ್ಳಿ ಹೋಬಳಿಯಲ್ಲಿ ಕಾಫಿ ಮಂಡಳಿ ಅಧಿಕಾರಿಗಳು ಸಮೀಕ್ಷೆ ಮಾಡಬೇಕಿತ್ತು. ಈಗ ಸಮೀಕ್ಷೆ ಮಾಡಿದರೆ, ಫಸಲು ಹಾನಿಯನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಬೆಳೆಗಾರರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಇನ್ನಾದರೂ ಸರ್ಕಾರ ಕಾಫಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಫಸಲು ಹಾನಿಗೆ ಹೆಚ್ಚಿನ ಪರಿಹಾರ ನೀಡಬೇಕು.
ಧುರಿಣ್ ಬಿದ್ದಪ್ಪ, ಕಾಫಿ ಬೆಳೆಗಾರ, ತಾಕೇರಿ ಗ್ರಾಮ

ವಿಪರೀತವಾದ ಮಳೆ ಮತ್ತು ಗಾಳಿಯಿಂದ ಕಾಫಿ, ಕಾಳು ಮೆಣಸು ನೆಲ ಕಚ್ಚಿದೆ. ಕಾಫಿ ಮಂಡಳಿ ಕೂಡಲೇ ಇದರ ಬಗ್ಗೆ ಸಮೀಕ್ಷೆ ಮಾಡಿ ರೈತರಿಗೆ ಸರ್ಕಾರದ ಮೂಲಕ ಪರಿಹಾರ ಕೊಡುವ ಕೆಲಸ ಮಾಡಬೇಕು. ಬೆಟ್ಟಸಾಲಿನ ತೋಟಗಳ ಸ್ಥಿತಿ ಅಯೋಮಯವಾಗಿದೆ. ಈ ಬಾರಿಯ ವಿಪರೀತ ಮಳೆ ಮತ್ತು ಗಾಳಿಯ ಪ್ರಭಾವವನ್ನು ಮನಗೊಂಡು ಸರ್ಕಾರಗಳು ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು. ಕೂಡಲೇ ಕಾಫಿಯ ಅಸ್ತಿತ್ವದ ಉಳಿವಿಗಾಗಿ ಸಮಗ್ರ ಪರಿಹಾರ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಜರಗಿಸಬೇಕು.
ರಘು ಎಸ್. ಎನ್., ಕಾಫಿ ಬೆಳೆಗಾರ, ಶನಿವಾರಸಂತೆ

ಇವತ್ತಿನ ಹವಾಮಾನ ವೈಪರೀತ್ಯದಿಂದಾಗಿ ಕೇವಲ 10 ಕಿ.ಮಿ. ವ್ಯಾಪ್ತಿಯಲ್ಲಿ ಬಿದ್ದಿರುವ ಮಳೆ ನೋಡಿದಾಗ ಆಶ್ಚರ್ಯ ಆಗುವುದು. ಅಕ್ಕ ಪಕ್ಕದ ಊರಿಗೆ ಮಳೆ ವ್ಯತ್ಯಾಸ ಇದೆ. ಹೀಗಿರುವಾಗ ಹೋಬಳಿವಾರು ಮಳೆ ಹಾನಿ ಪರಿಗಣಿಸುವ ಕಾರ್ಯ ಸಮಂಜಸವಲ್ಲ. ಕಾಫಿ ಫಸಲು ಉದುರುವ ಸಮಯದಲ್ಲಿ ಸಮೀಕ್ಷೆ ಮಾಡದೆ ಈಗ ಸಮೀಕ್ಷೆ ಮಾಡಿದರೆ ಯಾವ ಪ್ರಯೋಜನವಿಲ್ಲ. ಯಾವ ಬೆಳೆ ಯಾವ ಭಾಗದಲ್ಲಿ ಹಾನಿಯಾಗಿದೆ ಎಂಬ ಸಮೀಕ್ಷೆ ನಡೆಸುವುದು ಉತ್ತಮ.
ಉಮಾಶಂಕರ್, ಕಾಫಿ ಬೆಳೆಗಾರರು, ಶಿಡಿಗಳಲೆ

ಈ ಬಾರಿ ಹೆಚ್ಚು ಮಳೆಯಾಗಿದ್ದು ಇದರಿಂದ ಕಾಫಿ ಕೃಷಿ ನಷ್ಟವಾಗಿದೆ. ನಮ್ಮ ಕಡೆಯಂತೂ ಕೊಳೆರೋಗದಿಂದ ಅರ್ಧಕ್ಕಿಂತ ಹೆಚ್ಚು ಕಾಫಿ ನಷ್ಟವಾಗಿದೆ. ಇಲಾಖೆ ವತಿಯಿಂದ ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು. ಎಲ್ಲೋ ಒಂದು ಕಡೆ ಸಮೀಕ್ಷೆ ಮಾಡಿ ಎಲ್ಲರಿಗೂ ಒಂದೇ ಮಾನದಂಡ ಮಾಡಬಾರದು. ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿ, ಪರಿಹಾರ ಒದಗಿಸಬೇಕು.

ನೆಲ್ಲಿರ ಧನು, ಕಾಫಿ ಬೆಳೆಗಾರ, ಬಿರುನಾಣಿ

ಇಷ್ಟು ವರ್ಷ ಕಾಫಿ ಬೆಳೆಗಾರರು ತಮ್ಮ ತೋಟಗಳಲ್ಲಿ ಆದ ನಷ್ಟವನ್ನು ಬೆಳೆ ಸಮೀಕ್ಷೆ ಅಪ್ಲಿಕೇಶನ್ ಮೂಲಕ ಸ್ವತಃ ಸಮೀಕ್ಷೆ ನಡೆಸಿ ದಾಖಲೆ ಒದಗಿಸುತ್ತಿದ್ದರು. ಇದರಿಂದ ಪ್ರತಿಯೊಬ್ಬ ರೈತನ ತೋಟಗಳಲ್ಲೂ ಆದ ನಷ್ಟದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿತ್ತು. ತ್ವರಿತ ಪರಿಹಾರ ಸಿಗುತ್ತಿತ್ತು. ಆದರೆ ಈ ವರ್ಷ ಕಾಫಿ ಮಂಡಳಿಯ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷಾ ಕಾರ್ಯವನ್ನು ಮುಗಿಸಲು ಎಷ್ಟು ಸಮಯ ಬೇಕು? ರೈತರಿಗೆ ಯಾವಾಗ ಪರಿಹಾರದ ಹಣ ಸಿಗುತ್ತದೆ ಗೊತ್ತಿಲ್ಲ.
ತಕ್ಷಕ್ ಬಿದ್ದಪ್ಪ, ವಿರಾಜಪೇಟೆ.

ಇದೊಂದು ಅಪೂರ್ಣ ಸಮೀಕ್ಷೆ. ರೈತರ ನಿರೀಕ್ಷೆಗಳಿಗೆ ಮಣ್ಣೆರಚಲು ಅನ್ನದಾತರ ಬದುಕಿಗೆ ಕೊಳ್ಳಿ ಇಡುವ ಸಮೀಕ್ಷೆ. 32 ಹೆಕ್ಟೇರ್ ಅಂದರೆ ಒಂದು ಗ್ರಾಮ ಪಂಚಾಯಿತಿಯ ಪರಿಮಿತಿಗೆ ಬರಬಹುದೇನೋ. ಆದರೆ ಜಿಲ್ಲೆಗೆ ಹೋಲಿಸಿದರೆ ಎಳ್ಳಿನ ಏಳು ಭಾಗದಲ್ಲಿ ಒಂದು ಭಾಗ ಆಗಬಹುದು. ನೈಜ ಸಮೀಕ್ಷೆಗಳ ಮುಖಾಂತರ ನೊಂದ ರೈತರಿಗೆ ನ್ಯಾಯುಯುತ ಪರಿಹಾರ ಸಿಗಬೇಕಿದೆ.
ಪಟ್ಟಡ ಸುಗುಣಕುಮಾರ್, ಅವಂದೂರು ಗ್ರಾಮ, ಬೆಟ್ಟಗೇರಿ

ಕಾಫಿ ಬೆಳೆಗಾರರು ಕಳೆದ ವರ್ಷ ಮಳೆ ಇಲ್ಲದೆ ಬೆಳೆ ನಷ್ಟ ಅನುಭವಿಸಿದೆವು. ಈ ವರ್ಷ ಅಧಿಕ ಮಳೆಯಿಂದ ನಮಗೆ ಸಮಸ್ಯೆ ಆಗಿದೆ. ಅತಿವೃಷ್ಟಿ ಹಾನಿ ಸಂಬAಧ ಕಾಫಿ ಮಂಡಳಿ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ ಇದು ಸರಿಯಾಗಿ ನಡೆಯುತ್ತಿಲ್ಲ. ಎಲ್ಲ ತೋಟಗಳಿಗೆ ಅವರು ಭೇಟಿ ಕೊಡುತ್ತಿಲ್ಲ. ಇದರಿಂದ ನಮಗೆ ಪರಿಹಾರ ಸರಿಯಾಗಿ ಬರುವುದಿಲ್ಲ.
ಸಿ.ಎನ್. ಬೋಸ್ ವಿಶ್ವನಾಥ್, ಕಾನೂನು ಸಲಹೆಗಾರ, ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ

ನಮ್ಮ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಎಲ್ಲಾ ಕಡೆಯಲ್ಲೂ ಒಂದೇ ರೀತಿಯಾಗಿ ಇರುವುದಿಲ್ಲ. ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ತಾಲೂಕುವಾರು ಮಳೆಯ ಪ್ರಮಾಣ ನೋಡಿದರೆ ಸೋಮವಾರಪೇಟೆಯಲ್ಲಿ ಉತ್ತಮ ಮಳೆ ಕಂಡುಬರುತ್ತದೆ. ಅಲ್ಲಿ ಶಾಂತಳ್ಳಿ ಹೋಬಳಿಯಲ್ಲಿ ಸುರಿಯುವ ಅತಿ ಹೆಚ್ಚಿನ ಮಳೆ ಇದಕ್ಕೆ ಕಾರಣ. ಆದರೆ ತಾಲೂಕಿನ ಇತರೆಡೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರುತ್ತದೆ. ಇದು ಸಮೀಕ್ಷೆಯ ಮೇಲೆ ಪರಿಣಾಮ ಬೀರುತ್ತದೆ.
ಸಿರಕಜೆ ಲೋಕಪ್ರಕಾಶ್, ಕೃಷಿಕ ಭಾಗಮಂಡಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net