ತೊಗರಿ ಪರಿಹಾರದಿಂದ ರೈತರು ವಂಚಿತ, ಕೃಷಿ ಅಧಿಕಾರಿ ಅಮಾನತ್ತಿಗೆ ಅಖಂಡ ಕರ್ನಾಟಕ ರೈತ ಸಂಘ ಆಗ್ರಹ

AKRS KEUSHI JD AGAINEST PRESS MEET
ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕಣಿ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ತೊಗರಿ ಬೆಳೆಗೆ ವಿಮಾ ಕಂಪನಿಯಿಂದ ಬಿಡುಗಡೆಯಾಗಿರುವ ಮಧ್ಯಂತರ ಪರಿಹಾರದಿಂದ ರೈತರು ವಂಚಿತರಾಗಿದ್ದಾರೆ. ಇದಕ್ಕೆ ಕೃಷಿ ಜಂಟಿ ನಿರ್ದೇಶಕರು ಮಾಡಿದ ಯಡವಟ್ಟು ಕಾರಣ. ಹೀಗಾಗಿ ಕೂಡಲೇ ಕೃಷಿ ಜಂಟಿ ನಿರ್ದೇಶಕರನ್ನು ಅಮಾನತ್ತುಗೊಳಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಆಗ್ರಹಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಕಾಲಕ್ಕೆ ವರದಿ ಕಳುಹಿಸದ ಕಾರಣ ರೈತರಿಗೆ ಮಧ್ಯಂತರ ಪರಿಹಾರ ಬಂದಿಲ್ಲ. ಬೆಳೆ ಪರಿಹಾರ ಬರುವ ಸಂದರ್ಭದಲ್ಲಿಯೇ ಅನಧಿಕೃತವಾಗಿ ರಜೆ ಮಾಡಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಅನಾನುಕೂಲವಾಗಿದೆ. ಕೂಡಲೇ ಕೃಷಿ ಜಂಟಿ ನಿರ್ದೇಶಕರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ನೆರೆಯ ಕಲಬುರಗಿ ಜಿಲ್ಲೆಯ ರೈತರಿಗೆ 79.94 ಕೋಟಿ ಪರಿಹಾರ ಹಣ ಬಿಡುಗಡೆಯಾಗಿದೆ. ಆದರೆ, ಜಿಲ್ಲೆಗೆ ಈವರೆಗೆ ನಯಾಪೈಸೆ ಪರಿಹಾರ ಬಂದಿಲ್ಲ. ಜಿಲ್ಲೆಯಲ್ಲಿ 1.26 ಲಕ್ಷ ರೈತರು ವಿಮೆ ಮಾಡಿಸಿದ್ದಾರೆ. ಶೇ.90 ರಷ್ಟು ಬೆಳೆ ಹಾನಿಯಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಹಾಗೂ ಜಿಆರ್‌ಜಿ 152 ಹಾಗೂ ಜಿಆರ್‌ಜಿ 811 ಕಳಪೆ ಬಿತ್ತನೆ ಬೀಜ ವಿತರಿಸಿದ್ದು, ಅದನ್ನೇ ಬಿತ್ತನೆ ಮಾಡಿದ ಕಾರಣ ಸಂಪೂರ್ಣ ತೊಗರಿ ಬೆಳೆ ಹಾನಿಯಾಗಿದೆ. ಹೀಗಾಗಿ ವಿಮೆ ಕಟ್ಟಿರುವ ರೈತರಿಗೆ ಮಧ್ಯಂತರ ಪರಿಹಾರ ದೊರಕಬೇಕಿತ್ತು. ಪರಿಹಾರ ನೀಡುವ ಸಂದರ್ಭದಲ್ಲಿಯೇ ಅಧಿಕಾರಿ ಸಮರ್ಪಕ ಮಾಹಿತಿ ನೀಡಿಲ್ಲವೆಂದು ಆಪಾದಿಸಿದರು.

ಮುಖಂಡರಾದ ಈರಣ್ಣ ದೇವರಗುಡಿ, ಹಣಮಂತರಾಯ ಗುಣಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net