

ಹುಬ್ಬಳ್ಳಿ: ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ, ಕಳಸಾ& ಬಂಡೂರಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸಮಿತಿ ಅಧ್ಯಕ್ಷ ಬಿ.ಸಿ. ಪಾಟೀಲ ಅವರು ಸರ್ಕಾರಕ್ಕೆ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಮಹದಾಯಿಗಾಗಿ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ಕಾನೂನು ತೊಡಕು ನಿವಾರಿಸಿ ಯೋಜನೆ ಜಾರಿಗೊಳಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸಮಸ್ಯೆ ನಿವಾರಣೆ ಮಾಡುವುದು ದೊಡ್ಡದಲ್ಲ. ಲೋಕಸಭೆ ಚುನಾವಣೆಯ ಮುಂಚಿತವಾಗಿ ಯೋಜನೆ ಜಾರಿಗೊಳಿಸಲು ಪ್ರಯತ್ನ ಮಾಡಬೇಕು ಎಂದರು.
ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯಾಗದೆ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಮುಂಗಾರು ಬಿತ್ತನೆ ಮಾಡಿಲ್ಲ. ಸಂಪೂರ್ಣ ಬರಗಾಲ ಆವರಿಸಿದೆ. ಸರ್ಕಾರ ಎಚ್ಚೆತ್ತುಕೊಂಡು ಬರಗಾಲ ಘೋಷಿಸಿ, ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೃಷಿ ಕಾಮಿರ್ಕರಿಗೆ, ಹಿರಿಯ ನಾಗರಿಕರಿಗೆ 5 ಸಾವಿರ ರೂ. ಪಿಂಚಣಿ ನೀಡಬೇಕು. ಕಬ್ಬಿಗೆ ನ್ಯಾಯೋಚಿತ ಬೆಲೆ ನೀಡಬೇಕು ಎಂದರು.
ಎಚ್ಚರಿಕೆ: ಜು. 21ರಂದು ನವಲಗುಂದದಲ್ಲಿ ರೈತ ಹುತಾತ್ಮ ದಿನವನ್ನು ಸಮಿತಿ ವತಿಯಿಂದ ಆಚರಿಸಲಾಗುವುದು. ಮಹದಾಯಿಗಾಗಿ ನವೆಂಬರ್ವರೆಗೂ ಸರ್ಕಾರಕ್ಕೆ ಗಡುವು ನೀಡಲಾಗುವುದು. ಅಷ್ಟರಲ್ಲಿ ಯೋಜನೆ ಅನುಷ್ಠಾನ ಆಗದಿದ್ದರೆ ರಾಜ್ಯದ ಎಲ್ಲ ರೈತರು ಒಟ್ಟಾಗಿ ಹೋರಾಟ ಮಾಡಲು ರೂಪು ರೇಷೆ ಸಿದ್ಧಪಡಿಸಲಾಗುವುದು ಎಂದು ಎಚ್ಚರಿಸಿದರು.