ಗೋವಿನಜೋಳ ಖರೀದಿ ಕೇಂದ್ರ ತೆರೆಯಲು ಮನವಿ

21Sgn03
Published on

ಶಿಗ್ಗಾಂವಿ: ಸರ್ಕಾರ ತ್ವರಿತವಾಗಿ ಗೋವಿನ ಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ ರೈತರು ತಹಸೀಲ್ದಾರ್ ಪ್ರಕಾಶ ಕುದರಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಈ ವರ್ಷ ಶೇ. 60ರಷ್ಟು ಗೋವಿನ ಜೋಳ ಬೆಳೆ ಬೆಳೆದ ರೈತರು, ಬೆಂಬಲ ಬೆಲೆ ಸಿಗದೆ ಬಿತ್ತನೆಗೆ ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ರೈತರ ಕಷ್ಟ ಅರ್ಥೈಯಿಸಿಕೊಂಡು ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕಿತ್ತು. ಆದರೆ, ಸರ್ಕಾರ ಬರೀ ಆಶ್ವಾಸನೆ ನೀಡಿ ಕೈಕಟ್ಟಿ ಕುಳಿತುಕೊಂಡಿದೆ. ಕೂಡಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಎಪಿಎಂಸಿ ಸದಸ್ಯ, ಪ್ರಗತಿಪರ ರೈತ ತಿಪ್ಪಣ್ಣ ಸಾತಣ್ಣವರ, ಕೊರೊನಾ ವೈರಸ್ ಪರಿಣಾಮ ಗೋವಿನ ಜೋಳ ಕ್ವಿಂಟಾಲ್​ಗೆ 2 ಸಾವಿರದಿಂದ 1 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಪ್ರಕಾಶ ಕುದರಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನ ಸೆಳೆದು ತ್ವರಿತವಾಗಿ ಖರೀದಿ ಕೇಂದ್ರ ತೆರೆಯಲು ಕ್ರಮವಹಿಸುತ್ತೇನೆ ಎಂದರು. ಕೊಟ್ರೇಶ ಮಾಸ್ತರ ಬೆಳಗಲಿ, ಫಕೀರೇಶ ಕೊಂಡಾಯಿ, ರಾಮಜಿ ಶಿಂಧೆ, ಭೀಮಣ್ಣ ಕೊಕಾಟೆ, ಚನಬಸಪ್ಪ ಕೋಟಿ, ಫಕೀರಪ್ಪ ಶ್ಯಾಡಂಬಿ, ಬಿ.ಕೆ. ಜಾವುರು, ವಿರೂಪಾಕ್ಷಪ್ಪ ಅಂಗಡಿ, ಅಬ್ದುಲ್​ರಜಾಕ ತಹಶೀಲ್ದಾರ, ರಾಮಣ್ಣ ಕಮ ಡೊಳ್ಳಿ, ಶಿವಾನಂದಸ್ವಾಮಿ ಗೌಡಗೇರಿಮಠ, ಈರಪ್ಪ ಕರಡಿ, ರಾಜು ಕೊಂಡಾಯಿ, ನಾಗರಾಜ ಶಿಂಧೆ, ಈರಪ್ಪ ದುಂಡಸಿ, ಸಹದೇವಪ್ಪ ಕೋಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net