ಸಿಂಧುವಳ್ಳಿ, ದಡದಹಳ್ಳಿ ಕೆರೆ ಪುನಶ್ಚೇತನಗೊಳಿಸಲು ರೈತ ಪರ್ವ ಆಗ್ರಹ

Published on

ಮೈಸೂರು: ಜಯಪುರ ಹೋಬಳಿಯ ಸಿಂಧುವಳ್ಳಿ-ದಡದಹಳ್ಳಿ ಕೆರೆಗೆ ಕಲುಷಿತ ನೀರು ಹರಿದುಬರುತ್ತಿದೆ. ಇದನ್ನು ತಡೆಗಟ್ಟಿ ಕೆರೆ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವಂತೆ ಸಿಂಧುವಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ರಾಜ್ಯ ರೈತ ಪರ್ವದ ಪ್ರಧಾನ ಕಾರ್ಯದರ್ಶಿ ಡಾ.ಉಮಾಪತಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ರಾಯನಕೆರೆಯಲ್ಲಿ ಸಂಗ್ರಹವಾದ ಕಲುಷಿತ ನೀರಿನೊಡನೆ, ಗ್ರಾಮಗಳ ಚರಂಡಿ, ಕಾರ್ಖಾನೆ ತ್ಯಾಜ್ಯ ನೀರು ನಿರಂತರವಾಗಿ ಹರಿದುಬರುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಅನಾರೋಗ್ಯ ಭೀತಿ ಕಾಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಒಂದು ಕಾಲದಲ್ಲಿ ಹತ್ತಾರು ಗ್ರಾಮಗಳ ಜೀವ ಜಲ ನೀಡುತ್ತಿದ್ದ, ಈ ಕೆರೆ ಈಗ ಕಲುಷಿತಗೊಂಡಿದೆ. ಈ ಕೆರೆಯ ಸಂಪೂರ್ಣ ನಿರ್ವಹಣೆ ಮತ್ತು ಅಭಿವೃದ್ಧಿ ಸಣ್ಣ ನೀರಾವರಿ ಇಲಾಖೆ ಮೇಲ್ವಿಚಾರಣೆಯಲ್ಲಿತ್ತು. ಆದರೆ ಜಲ ಸಂವರ್ಧನಾ ಯೋಜನೆ ಜಾರಿಗೆ ತಂದ ಬಳಿಕ ನಿಂತು ಹೋಗಿದೆ. ಹೀಗಾಗಿ ಕೆರೆ ಅಧೋಗತಿಗೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಕೂಡಲೇ ಇತ್ತ ಗಮನಹರಿಸಿ ಒತ್ತುವರಿ ತೆರವುಗೊಳಿಸಬೇಕು. ಕಲುಷಿತ ನೀರು ಕೆರೆಗೆ ಬರುವುದನ್ನು ತಡೆಯಬೇಕು. ಕಾರ್ಖಾನೆಗಳು ವಿಷಯುಕ್ತ ನೀರನ್ನು ಈ ಕೆರೆಗೆ ಹರಿಸುವುದನ್ನು ತಡೆಯಬೇಕು. ಈಗ ಕೆರೆಯಲ್ಲಿರುವ ಮಲಿನ ನೀರು ತೆರವುಗೊಳಿಸಬೇಕು. ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಕೃಷ್ಣಯ್ಯ, ನಂಜುಂಡ, ನವೀನ್‌ಕುಮಾರ್, ಶಿವಯ್ಯ ಬ್ಯಾತಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net