

ಇಂಡಿ: ನಗರದ ಮೂರು ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಹಿರೇಇಂಡಿ ಸುತ್ತಮುತ್ತಲಿನ ರೈತರು ಗುರುವಾರ ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಕಾಸುಗೌಡ ಬಿರಾದಾರ, ಅಶೋಕ ಅಕಲಾದಿ, ದೇವೇಂದ್ರ ಕುಂಬಾರ, ಮಲ್ಲು ಗುಡ್ಲ ಮಾತನಾಡಿ, ಈಗಾಗಲೇ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಬಿಡಲಾಗಿದೆ. ಅದೇ ಕಾಲುವೆ ಮುಖಾಂತರವೇ ಹಿರೇಇಂಡಿ ಕೆರೆ ತುಂಬಿಸಬೇಕು. ಅಲ್ಲದೆ ಬಡಿಗೇರ ಕೆರೆ, ಮೋನಪ್ಪ ತಾಂಡಾ ಕೆರೆಗಳನ್ನು ಭುಯ್ಯರ ಲಿಫ್ಟ್ ಇರಿಗೇಶನ್ ಯೋಜನೆ ಮೂಲಕ ತುಂಬಿಸಬೇಕೆಂದು ಆಗ್ರಹಿಸಿದರು.
ಸಂತೋಶ ಲಾಳಸಂಗಿ, ಬಸು ಕುಂಟೋಜಿ ಮಾತನಾಡಿ, ನಮ್ಮ ಭಾಗದಲ್ಲಿ ಸಮರ್ಪಕ ಮಳೆಯಾಗುತ್ತಿಲ್ಲ. ಕಾಲುವೆ, ನದಿಗಳ ಮೂಲಕ ಕೆರೆಗಳನ್ನಾದರೂ ತುಂಬಿದರೆ ಅಂತರ್ಜಲಮಟ್ಟ ಹೆಚ್ಚಾಗಿ ಬಾವಿ, ಬೋರ್‌ವೆಲ್‌ಗಳಿಗೆ ನೀರಾಗುತ್ತದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರು, ಸಚಿವರು ನೀರು ತುಂಬಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅನೀಲಗೌಡ ಬಿರಾದಾರ, ಶ್ರೀಶೈಲ ಪೂಜಾರಿ, ಮಾಳು ಪೂಜಾರಿ, ಶಾಂತು ಲಾಳಸಂಗಿ, ಕಾಂತು ಹೊಟಗಿ, ಮಲ್ಲಪ್ಪ ಲಾಳಸಂಗಿ, ತುಕಾರಾಮ ತಾಂಬೆ, ಶಾಂತು ನಾಟೀಕಾರ ಇತರರಿದ್ದರು.