

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಾಲೂಕಿನಮಾರಡಗಿ, ಶಿವಳ್ಳಿ, ಹೆಬ್ಬಳ್ಳಿ, ಅಮ್ಮಿನಭಾವಿ, ಮರೇವಾಡ ಗ್ರಾಮಗಳ ಜಮೀನುಗಳಿಗೆ ಸೋಮವಾರ ಭೇಟಿ ನೀಡಿ, ಮಳೆಯಿಂದಾದ ಬೆಳೆ ಹಾನಿಯನ್ನು ಪರಿಶೀಲಿಸಿದರು. ರೈತರು ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ವಿನಂತಿಸಿದರು.
ಮಾರಡಗಿ ಗ್ರಾಮದ ಮಲ್ಲಿಕಾರ್ಜುನ ಕುರಿ ಅವರ 2 ಎಕರೆ ಸೋಯಾಬಿನ್ ಬೆಳೆ ಸಂಪೂರ್ಣ ಹಾನಿಯಾಗಿರುವುದನ್ನು ಜಿಲ್ಲಾಽಕಾರಿ ವೀಕ್ಷಿಸಿದರು. ಹಚ್ಚ ಹಸಿರು ಬೆಳೆ ಕಂಡರೂ ಕಾಯಿ ಬಿಟ್ಟಿಲ್ಲ. ಬೆಳೆ ಪ್ರಯೋಜನಕ್ಕೆ ಬರುವುದಿಲ್ಲ. ಸಾಲ ಮಾಡಿ ಬಿತ್ತನೆ ಮಾಡಿದ್ದು, ಅದನ್ನು ತೀರಿಸುವುದು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಪಕ್ಕದ ಜಮೀನಿನ ಮುತ್ತು ಬಳ್ಳಾರಿ ಬಿತ್ತನೆ ಮಾಡಿರುವ ಉದ್ದು ಬೆಳೆ ಸಂಪೂರ್ಣ ಹಾಳಾಗಿತ್ತು. ಬಳಿಕ ಸೌತೆ ಬಿತ್ತನೆ ಮಾಡಿದ್ದು, ಅದೂ ನಾಶವಾಗಿದೆ ಎಂದು ದುಃಖ ತೋಡಿಕೊಂಡರು.
ಮೂಗಪ್ಪ ಶಿವಳ್ಳಿ ಅವರ 4 ಎಕರೆ ಜಮೀನಿನಲ್ಲಿ ಬೆಳೆದ ಉಳ್ಳಾಗಡ್ಡಿ ಬೆಳೆ ಜಲಾವೃತವಾಗಿದ್ದು ಕಂಡುಬ0ತು. ಎಕರೆಗೆ 60ರಿಂದ 80 ಸಾವಿರ ರೂಪಾಯಿ ಬರುವ ಬೆಳೆ ಸಂಪೂರ್ಣ ಹಾಳಾಗಿರುವುದನ್ನು ರೈತರು ತೋರಿಸಿದರು. ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ವಿನಂತಿಸಿದರು.
ನ0ತರ ಜಿಲ್ಲಾಧಿಕಾರಿ ಶಿವಳ್ಳಿ ಗ್ರಾಮದ ಕರಬಸಪ್ಪ ರೋಣದ ಅವರ 4 ಎಕರೆ ಹೆಸರು ಬೆಳೆ ಹಾಗೂ ಪವಾಡೆಪ್ಪ ಕಿತ್ತೂರ ಅವರ 3 ಎಕರೆ ಹೆಸರು ಬೆಳೆ ವೀಕ್ಷಿಸಿದರು.
ರೈತರನ್ನು ಉದ್ದೇಶಿಸಿ ಜಿಲ್ಲಾಽಕಾರಿ ದಿವ್ಯ ಪ್ರಭು ಮಾತನಾಡಿ, ನಿರಂತರ ಮಳೆ, ಹವಾಮಾನ ವೈಪರಿತ್ಯದಿಂದ ಕೀಟಬಾಧೆಗೆ ತುತ್ತಾದವು. ಕೆಲ ರೈತರು ಮರುಬಿತ್ತನೆ ಮಾಡಿದ್ದು, ಜಮೀನುಗಳಲ್ಲಿ ಹಸಿರು ಕಾಣಿಸುತ್ತಿದ್ದರೂ ಫಸಲು ಕಾಣುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ತಂಡಗಳು ಸಮೀಕ್ಷೆ ನಡೆಸುತ್ತಿವೆ. ಒಂದು ವಾರದಲ್ಲಿ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ, ದತ್ತಾಂಶಗಳನ್ನು ದಾಖಲಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಬೆಳೆ ವಿಮೆ ಮಾಡಿಸಿರುವ ರೈತರು ಮಧ್ಯಂತರ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಸುಮಾರು 26,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಿ ತುರ್ತು ಕ್ರಮ ವಹಿಸಲು ವಿಮಾ ಕಂಪನಿ ಪ್ರತಿನಿಧಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ಜಯಶ್ರೀ ಹಿರೇಮಠ, ಸಹಾಯಕ ನಿರ್ದೇಶಕ ರಾಜಶೇಖರ ಅಣಗೌಡರ, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಕಂದಾಯ ಇಲಾಖೆ ಅಽಕಾರಿಗಳು, ಸಿಬ್ಬಂದಿ, ರೈತ ಮುಖಂಡರು ಉಪಸ್ಥಿತರಿದ್ದರು.