ಶಿವಾನಂದ ಪಾಟೀಲರನ್ನು ಸಂಪುಟದಿಂದ ವಜಾಗೊಳಿಸಲು ಆಗ್ರಹ

27_HSN_07
ರೈತರ ಬಗ್ಗೆ ಲಘುವಾಗಿ ಮಾತನಾಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ರೈತರ ಹಕ್ಕು ರಾಜ್ಯ ರೈತ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ದೊಡ್ಡೇರಿ ತಾಂಡವೇಶ್, ವಾಸು, ಶಂಕರೇಗೌಡ, ಶ್ರೀನಿವಾಸ್ ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
Published on

ಹಾಸನ: ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ರೈತರ ಬಗ್ಗೆ ತುಂಬಾ ಲಘುವಾಗಿ ಮಾತನಾಡುವ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ರೈತರ ಹಕ್ಕು ರಾಜ್ಯ ರೈತ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತರ ಹಕ್ಕು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ದೊಡ್ಡೇರಿ ತಾಂಡವೇಶ್ ಮಾತನಾಡಿ, ರೈತರು ಸಾಲ ಮನ್ನಾ ಆಗಲಿ ಎಂದು ಬರಗಾಲ ಬರಲಿ ಅಂತ ಕಾಯುತ್ತಿರುತ್ತಾರೆ ಎಂದು ಸಚಿವರು ಹೇಳಿರುವುದು ಖಂಡನೀಯ. ಈ ರೀತಿಯ ಅವಹೇಳನಕಾರಿ ಮಾತನ್ನು ಸಚಿವರು ಆಡಬಾರದಿತ್ತು. ಅನ್ನ ಕೊಡುವ ಅನ್ನದಾತರ ಬಗ್ಗೆ 5 ಲಕ್ಷ ದುಡ್ಡು ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ಈ ಮೂಲಕ ಸ್ವಾಭಿಮಾನದಿಂದ ಬದುಕುವ ರೈತರನ್ನು ಹೀಯ್ಯಳಿಸಿದ್ದಾರೆ ಎಂದು ಕಿಡಿ ಕಾರಿದರು.

ಸರ್ಕಾರ ನೀರು, ಕರೆಂಟು, ರಸಗೊಬ್ಬರ, ಬಿತ್ತನೆ ಬೀಜವನ್ನು ಪುಕ್ಕಟ್ಟೆಯಾಗಿ ಕೊಟ್ಟಿದ್ದಾರೆ ಅಂತಲೂ ಮಾತನಾಡಿದ್ದಾರೆ. ಸಚಿವರೂ ಒಬ್ಬ ರೈತರ ಮಗನಾಗಿ, ಅದೇ ರೈತರ ಬಗ್ಗೆ ಕೇವಲವಾಗಿ ಮಾತನಾಡುವ ಮೂಲಕ ರೈತ ಸಂಕುಲವನ್ನು ಅವಮಾನ ಮಾಡಿದ್ದಾರೆ. ರೈತರು ದೇಶದ ಬೆನ್ನೆಲುಬು. ಹಾಗಾಗಿ ಸರ್ಕಾರ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶಿವಾನಂದ ಪಾಟೀಲ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ಹೊಳೆನರಸೀಪುರ ತಾಲೂಕು ಅಧ್ಯಕ್ಷ ವಾಸು, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಶಂಕರೇಗೌಡ, ಹಾಸನ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net