

ಆನೇಕಲ್ : ಕರ್ನಾಟಕ ಹೌಸಿಂಗ್ ಬೋರ್ಡ್ ಭೂಸ್ವಾಧಿನಕ್ಕೆ ಒಳಪಟ್ಟ ಬಗರ್ಹುಕುಂ ಸಾಗುವಳಿದಾರರಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ರೈತರು ಇಂಡ್ಲವಾಡಿ ಗ್ರಾಮ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬಗರ್ಹುಕುಂ ಸಾಗುವಳಿ ರೈತರ ಹೋರಾಟ ಸಮಿತಿ, ಕರ್ನಾಟಕ ಹೌಸಿಂಗ್ ಬೋರ್ಡ್ ಭೂಸ್ವಾಧಿನ ಹೋರಾಟ ಸಮಿತಿ ಸಹಯೋಗದಲ್ಲಿ ನೂರಾರು ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ರೈತ ಮುಖಂಡ ಶಿವರಾಮರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಬಗರ್ಹುಕುಂ ಸಾಗುವಳಿದಾರರು 40 ವರ್ಷಗಳಿಗೂ ಮೇಲ್ಪಟ್ಟು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ, ಫಾರಂ 50, 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಹಕ್ಕು ಪತ್ರಕ್ಕಾಗಿ ರೈತರು ರೈತ ಸಂಟನೆಗಳ ಜತೆಗೂಡಿ ಹಲವಾರು ವರ್ಷಗಳಿಂದ ನಿರಂತರವಾಗಿ ಹಗಲಿರಲು ಹೋರಾಟ ನಡೆಸುತ್ತಾ ಬಂದಿದ್ದಾರೆ. ಸರ್ಕಾರಗಳಿಗೆ ಅನೇಕ ಬಾರಿ ಬೇರೆ ಬೇರೆ ಸಂದರ್ಭದಲ್ಲಿ ರೈತರು ಪ್ರತಿಭಟನೆಯ ಮೂಲಕ ಮನವಿ ಪತ್ರಗಳನ್ನು ಕೂಡ ನೀಡಿದ್ದಾರೆ, ಬಿಬಿಎಂಪಿ ಗಡಿ ಪ್ರದೇಶದಿಂದ 18 ಕಿಲೋಮೀಟರ್ ಆದೇಶ ಇರುವುದರಿಂದ ಹಕ್ಕುಪತ್ರ ನೀಡಲು ಬರುವುದಿಲ್ಲ ಎಂಬುದಾಗಿ ಸರ್ಕಾರ ಕಾರಣ ನೀಡುತ್ತಾ ಬಂದಿದ್ದು, ನ್ಯಾಯಾಲಯದ ಆದೇಶಗಳು ಆದರೂ ಕೂಡ ಸರ್ಕಾರ ಇದನ್ನು ತಿರಸ್ಕರಿಸುತ್ತಾ ಬಂದಿದೆ. ರೈತರಿಗೆ ಹಕ್ಕು ಪತ್ರ ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದರು.
ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ರೈತರು ಹಮ್ಮಿಕೊಳ್ಳಬೇಕಾಗುತ್ತದೆ. ಅನ್ನ ನೀಡುವ ರೈತರಿಗೆ ನ್ಯಾಯ ಕೊಡಬೇಕಾದ ಜವಾಬ್ದಾರಿ ಸರ್ಕಾರದ್ದು, ಹೀಗಾಗಿ ರ್ನಿಲಕ್ಷ$್ಯ ಸರಿಯಲ್ಲ ಎಂದು ಕಿಡಿಕಾರಿದರು.
ನ್ಯಾಯ ಸಿಗುವ ತನಕ ಹೋರಾಟ : ಭೂಮಿ ಕಳೆದುಕೊಂಡ ಬಡ ರೈತರಿಗೆ ಪರಿಹಾರ ನೀಡಬೇಕಾದ ಜವಾಬ್ದಾರಿ ಸರ್ಕಾರದ್ದು, ರಾಜ್ಯ ಸರ್ಕಾರದ ವಸತಿ ಮಂತ್ರಿಗಳಿಗೆ ಮನವಿ ಸಲ್ಲಿಸಲು ರೈತ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಸಭೆ ಕರೆದು ರ್ನಿಣಯ ಕೈಗೊಳ್ಳಬೇಕು. ಕರ್ನಾಟಕ ಹೌಸಿಂಗ್ ಬೋರ್ಡ್ ವತಿಯಿಂದ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಮುಖಂಡ ನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸೂರ್ಯ ನಗರ ನಾಲ್ಕನೇ ಹಂತದಲ್ಲಿ ಬಗರ್ಹುಕುಂ ರೈತರ ಭೂಮಿಯನ್ನು ಕರ್ನಾಟಕ ಗೃಹ ಮಂಡಳಿ ಸ್ವಾಧಿನಪಡಿಸಿಕೊಂಡು ಸುಮಾರು 700 ಎಕರೆ ಭೂಮಿಗೆ ಭೂ ಪರಿಹಾರ ನೀಡದೆ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಖಂಡನೀಯ. > ಶಿವರಾಮರೆಡ್ಡಿ ರೈತ ಮುಖಂಡ