ಸಭೆ ಕರೆಯದೆ ವಿದ್ಯುತ್​ ಮಾರ್ಗ ಕಾಮಗಾರಿ ಬೇಡ...

UDP-3-3-RaithaSangha
ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್​ ಪ್ರಸರಣ ಮಾರ್ಗ ವಿರೋಧಿಸಿ ಸಂಸದ ಕೋಟ ಪೂಜಾರಿ ಅವರಿಗೆ ರೈತರ ನಿಯೋಗ ಮನವಿ ಸಲ್ಲಿಸಿತು. ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಶ್ರೀಧರ ಶೆಟ್ಟಿ ಬೈಲುಗುತ್ತು, ರಾಜೀವ ಗೌಡ, ಅಮರನಾಥ ಶೆಟ್ಟಿ, ರೇಶ್ಮಾ ಶೆಟ್ಟಿ, ಚಂದ್ರಹಾಸ ಶೆಟ್ಟಿ ಇತರರಿದ್ದರು.
Published on

ಸಂಸದ ಪೂಜಾರಿಗೆ ರೈತರ ನಿಯೋಗ ಮನವಿ

ಉಡುಪಿ-ಕಾಸರಗೋಡು 400 ಕೆವಿ ಯೋಜನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ರೈತರ ವಿರೋಧದ ನಡುವೆಯೂ ಸರ್ಕಾರಿ ಅಧಿಕಾರಿಗಳ ಆದೇಶವನ್ನೂ ಧಿಕ್ಕರಿಸಿ ಕೃಷಿ ಭೂಮಿಯಲ್ಲಿ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್​ ಪ್ರಸರಣ ಮಾರ್ಗ ಕಾಮಗಾರಿಗೆ ಕಂಪನಿಯವರು ಮುಂದಾಗುತ್ತಿದ್ದಾರೆ. ಸಂಸದ-ಶಾಸಕರ, ಅಧಿಕಾರಿಗಳ ಸಭೆ ಕರೆಯುವ ಮೊದಲು ಯಾವುದೇ ಕಾರಣಕ್ಕೂ ಕಾಮಗಾರಿಗೆ ಮುಂದಾಗಬಾರದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ವಿವಿಧ ಹೋರಾಟ ಸಮಿತಿಗಳ ನಿಯೋಗದೊಂದಿಗೆ ಉಡುಪಿ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.

ನೆಲೆ ಕಳೆದುಕೊಳ್ಳುವ ಭೀತಿ

ವಿದ್ಯುತ್​ ಪ್ರಸರಣ ಮಾರ್ಗದ ನಿಮಾರ್ಣದಿಂದ ಅಡಕೆ, ತೆಂಗು, ರಬ್ಬರ್​, ಗೇರು ಸೇರಿ ವಿವಿಧ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತದೆ. ಹಲವು ಮನೆಗಳ ಮೇಲೆ ವಿದ್ಯುತ್​ ಮಾರ್ಗ ಹೋಗುವ ಕಾರಣದಿಂದ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ಜನರಿದ್ದಾರೆ. ಈ ಕಾರಣದಿಂದಾಗಿ ವಿದ್ಯುತ್​ ಮಾರ್ಗವನ್ನು ಹೆದ್ದಾರಿ ಬದಿ ಭೂಮಿಯ ಒಳಗೆ ಅಥವಾ ಸಮುದ್ರ ಮಾರ್ಗವಾಗಿ ತೆಗೆದುಕೊಂಡು ಹೋಗುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.

ವಿಟ್ಲ ವಿದ್ಯುತ್​ ಮಾರ್ಗ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಇನ್ನಾ ಗ್ರಾಮದ ವಿದ್ಯುತ್​ ಮಾರ್ಗ ಹೋರಾಟ ಸಮಿತಿ ಅಧ್ಯಕ್ಷ ಅಮರನಾಥ ಶೆಟ್ಟಿ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ರೈತ ಸಂಘ ಮಂಗಳೂರು ತಾಲೂಕು ಅಧ್ಯಕ್ಷ ದಯಾನಂದ ಶೆಟ್ಟಿ ಕುಪ್ಪೆಪದವು, ರೈತ ಮುಖಂಡ ಉದಯ ಕುಮಾರ್​ ಜೈನ್​, ಮಾತೃ ಭೂಮಿ ಸಂಘಟನೆಯ ಅಲ್ಪಾನ್ಸ್​, ಸಂತ್ರಸ್ತ ರೈತರಾದ ಇಸ್ಮಾಯಿಲ್​, ರೇಶ್ಮಾ ಶೆಟ್ಟಿ, ಅಣ್ಣು ಗೌಡ, ರಾರ್ಬಟ್​, ಸಂಜೀವ ಗೌಡ ಮಂಜಲಾಡಿ, ಲಕ್ಷ್ಮೀನಾರಾಯಣ ಇತರರು ಉಪಸ್ಥಿತರಿದ್ದರು.

ಕಂಪನಿ ಪರವಾಗಿ ನಿರ್ಣಯ, ಸಂತ್ರಸ್ತರಿಗೆ ಅನ್ಯಾಯ

ಉಡುಪಿ-ಕಾಸರಗೋಡು ವಿದ್ಯುತ್​ ಮಾರ್ಗದಿಂದ ಹೊರಸೂಸುವ ವಿಕಿರಣಗಳಿಂದ ಮನುಷ್ಯ ಸೇರಿ ಪ್ರಾಣಿ ಸಂಕುಲಕ್ಕೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ. ಸಹಾಯಕ ಆಯುಕ್ತರೊಂದಿಗೆ ನಡೆದ ಸಭೆಯಲ್ಲಿ ರೈತರು ಹೇಳಿದ ವಿಚಾರ ಬಿಟ್ಟು ಕಂಪನಿ ಪರವಾಗಿ ನಿರ್ಣಯ ಕೈಗೊಂಡು ಸಂತ್ರಸ್ತರಿಗೆ ಅನ್ಯಾಯ ಮಾಡಲಾಗಿದೆ ಎಂದು ರೈತರ ನಿಯೋಗ ಸಂಸದ ಕೋಟ ಅವರಿಗೆ ದೂರು ಸಲ್ಲಿಸಿತು.

ಜಿಲ್ಲಾಧಿಕಾರಿಗಳಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ರೈತರು ತಾಳ್ಮೆ ಕಳೆದುಕೊಳ್ಳಬಾರದು. ಧೈರ್ಯದಿಂದ ಇರಬೇಕು. ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಲಾಗುವುದು. | ಕೋಟ ಶ್ರೀನಿವಾಸ್​ ಪೂಜಾರಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net