ಕೆನರಾ ಬ್ಯಾಂಕ್ ಎದುರು ಪ್ರತಿಭಟನೆಗೆ ಬೆಳೆಗಾರರ ನಿರ್ಧಾರ

5 ckm 1 deepak doddaiag
ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿದರು.
Published on

ಚಿಕ್ಕಮಗಳೂರು: ಸರ್ಫಾಸಿ ಕಾಯ್ದೆ ಅಡಿ ಕಾಫಿ ಬೆಳೆಗಾರರ ತೋಟಗಳನ್ನು ಆನ್ ಲೈನ್ ನಲ್ಲಿ ಹರಾಜು ಮಾಡುತ್ತಿರುವ ಕೆನರಾ ಬ್ಯಾಂಕ್ ಕ್ರಮವನ್ನು ಖಂಡಿಸಿ ಮಂಗಳೂರಿನಲ್ಲಿರುವ ಬ್ಯಾಂಕ್ ನ ಮುಖ್ಯ ಕಚೇರಿ ಎದುರು ಅ. 10ರಂದು ಪ್ರತಿಭಟನೆ ನಡೆಸಲು ಜಿಲ್ಲೆಯ ಕಾಫಿ ಬೆಳೆಗಾರರು ನಿರ್ಧಾರ ಮಾಡಿದ್ದಾರೆ ಎಂದು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಳ ಮಾಲೀಕರಿಗೆ ಯಾವುದೇ ಮಾಹಿತಿಯನ್ನು ನೀಡದೆ ಬ್ಯಾಂಕ್ ಅಧಿಕಾರಿಗಳು ಆನ್ಲೈನ್ ಮೂಲಕ ತೋಟಗಳನ್ನು ಹರಾಜು ಹಾಕುತ್ತಿದ್ದಾರೆ. ಇದರಿಂದಾಗಿ ನೂರಾರು ಬೆಳೆಗಾರರು ಬೀದಿಗೆ ಬರುವ ಆತಂಕ ಎದುರಾಗಿದೆ. ಈ ಕ್ರಮವನ್ನು ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡದ ಬೆಳೆಗಾರರಿಗೆ ಒನ್ ಟೈಮ್ ಸೆಟ್ಲ್ಮೆಂಟ್ ಗೆ ಅವಕಾಶ ನೀಡಲು ಸಾಧ್ಯವಿದೆ. ಆದರೆ ಬ್ಯಾಂಕ್ ನ ಕೆಲವು ಅಧಿಕಾರಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಬೆಳೆಗಾರರು ಸಂಕಷ್ಟ ಎದುರಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ನ ವಸು ಲಾತಿ ವಿಭಾಗದ ಅಧಿಕಾರಿಗಳೇ ಜಮೀನುಗಳಿಗೆ ದರ ನಿಗದಿ ಮಾಡುತ್ತಿದ್ದಾರೆ. ಜೊತೆಗೆ ಮಧ್ಯವರ್ತಿಗಳಾಗಿ ಖರೀದಿದಾರರನ್ನು ಕರೆತಂದು ಜಮೀನನ್ನು ಮಾರಾಟ ಮಾಡುತ್ತಿದ್ದಾರೆ. ಕಾಫಿ ಬೆಳೆಗಾರರು ಮರ್ಯಾದಸ್ಥರು. ಬ್ಯಾಂಕ್ ಸಾಲ ಮರುಪಾವತಿ ಮಾಡದೆ ಮೋಸ ಮಾಡುವವರಲ್ಲ. ಹೀಗಿರುವಾಗ ಬೆಳೆಗಾರರ ಜಮೀನು ಹರಾಜು ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ಬಂದರೆ ಮರ್ಯಾದೆಗೆ ಅಂಜಿ ಸರಣಿ ಆತ್ಮಹತ್ಯೆಗಳು ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಕಾಫಿ ಬೆಳೆಗಾರರನ್ನು ಸರ್ಫಾಸಿ ಕಾಯ್ದೆಯಿಂದ ಹೊರಗಿಡಬೇಕು. ರೈತರು ತಮ್ಮ ಜಮೀನುಗಳ ಅಭಿವೃದ್ಧಿಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದಾರೆ. ಆದರೆ ಹವಮಾನ ವೈಪರಿತ್ಯ, ಬೆಲೆ ಏರಿಳಿತ ಹಾಗೂ ಕಾಫಿ ತೋಟಗಳ ನಿರ್ವಹಣಾ ವೆಚ್ಚ ಹೆಚ್ಚಳದಿಂದಾಗಿ ಹಲವು ರೈತರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬೆಳೆಗಾರರಿಗೆ ಸಾಲ ಮರುಪಾವತಿಗೆ ಇನ್ನಷ್ಟು ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪಕ್ಕದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಕಾಫಿಯ ಮೇಲಿನ ಸಾಲವನ್ನು ಸರ್ಫಾಸಿ ಕಾಯ್ದೆಯಿಂದ ಹೊರಗಿಡಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಇದೇ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಬೇಕು. ಸರ್ಫಾಸಿ ಕಾಯ್ದೆಯನ್ನು ಕಾಫಿ ಬೆಳೆಗಾರರ ಮೇಲೆ ಹೇರಿದ್ದೇ ಆದಲ್ಲಿ ಸಾವಿರಾರು ರೈತರು ತಮ್ಮ ಜಮೀನು ಕಳೆದುಕೊಂಡು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕಾನೂನು ತಿದ್ದುಪಡಿ ತಂದು ಕಾಫಿ ಬೆಳೆಗಾರರಿಗೆ ಪರಿಹಾರ ಒದಗಿಸಿ ಕೊಡಬೇಕು. ಕಾಫಿ ಬೆಳೆಯುವ ರೈತರ ಸುತ್ತಿ ಸಾಲಕ್ಕೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕು. ಇಲ್ಲದಿದ್ದಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳಗಾರರಾದ ದಯಾಕರ್, ಮನೋಹರ್, ಕೆ.ಎಲ್.ಸಂತೋಷ್, ಕೆ.ಎಂ.ಪ್ರಕಾಶ್, ಸುಬ್ರಹ್ಮಣ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net