ರೈತ ದಿನಾಚರಣೆ ಸರ್ಕಾರಿ ಕಾರ್ಯಕ್ರಮವಾಗಲಿ

23BANNUR1
Published on

ಬನ್ನೂರು: ಮಾಜಿ ಪ್ರಧಾನಿ ಚರಣ್‌ಸಿಂಗ್ ಚೌಧರಿ ಅವರ ಸ್ಮರಣಾರ್ಥ ಆಚರಿಸುತ್ತಿರುವ ರೈತ ದಿನ ಖಾಸಗಿ ಕಾರ್ಯಕ್ರಮವಾಗದೆ ಸರ್ಕಾರ ಮಟ್ಟದಲ್ಲಿಯೇ ಆಚರಿಸುವ ಕಾರ್ಯಕ್ರಮವಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಇಂಗಿತ ವ್ಯಕ್ತಪಡಿಸಿದರು.


ಪಟ್ಟಣದ ಅತಿಥಿ ಗೃಹದಲ್ಲಿ ರೈತ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದರು. ರೈತ ದೇಶದ ಬೆನ್ನೆಲುಬು. ಆದರೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಗಳು ಆಗದಿರುವುದು ಬೇಸರ ಉಂಟು ಮಾಡಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಬರ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಸಮಾಜ ಸೇವಕ ವೈ.ಎಸ್.ರಾಮಸ್ವಾಮಿ ಮಾತನಾಡಿ, ರೈತ ದೇಶದ ಬೆನ್ನೆಲುಬು ಎನ್ನುತ್ತಾರೆಯೇ ವಿನಾ ಬೆನ್ನೆಲುಬಿಗೆ ಅಗತ್ಯವಿರುವ ಸೌಕರ್ಯ ನೀಡುತ್ತಿಲ್ಲ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಸೂಕ್ತ ಮಾರುಕಟ್ಟೆ, ನೀರಿನ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಸಾಧ್ಯ ಎಂದು ತಿಳಿಸಿದರು.


ಇಂದು ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಎಷ್ಟೋ ರೈತರು ಕೃಷಿ ಬಿಟ್ಟು ಬೇರೆ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರ ರೈತರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಒಕ್ಕಲಿಗ ವಿಕಾಸ ವೇದಿಕೆಯ ಯಮುನಾ, ಮುಖಂಡರಾದ ಮಹೇಶ್, ಪಾರ್ಥ, ಮೇಗಲಕೊಪ್ಪಲಿನ ರಂಗಸ್ವಾಮಿ, ಜಯರಾಂ, ಮಲಿಯೂರು ರಾಜಣ್ಣ, ಕೇತುಪುರ ಆನಂದ್, ಮಹೇಂದ್ರಸಿಂಗ್ ಕಾಳಪ್ಪ, ನಾಗಣ್ಣ, ರಾಜು ಸೇರಿದಂತೆ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net