ಸಮಗ್ರ ಕೃಷಿಯಿಂದ ಆದಾಯ ಹೆಚ್ಚಳ: ಜಿಲ್ಲಾಧಿಕಾರಿ ನಾಗರಾಜ್ ಕರೆ

23CBP1
Published on

ಚಿಕ್ಕಬಳ್ಳಾಪುರ: ಎಲ್ಲ ನಾಗರಿಕತೆಗಳ ಮೂಲವಾದ ಕೃಷಿಗೆ ವಿಶೇಷ ಆದ್ಯತೆ ನೀಡಿದಾಗ ಮಾತ್ರ ಸಮೃದ್ಧಿ ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಶುಕ್ರವಾರ ಕೈಗೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಪ್ರತಿಯೊಬ್ಬರ ಹೊಟ್ಟೆಯನ್ನು ತುಂಬಿಸಿ, ಹಸಿವನ್ನು ನೀಗಿಸುವ ಆಹಾರ ಉತ್ಪಾದಕ ರೈತ. ಎಲ್ಲ ನಾಗರಿಕತೆಗಳ ಮೂಲ ನೇಗಿಲು ಮತ್ತು ಉಳುಮೆ ಮಾಡುವ ಕೃಷಿ ಎಂದರು.

ಇಂದು 5ಜಿ ತಂತ್ರಜ್ಞಾನದಲ್ಲಿರಬಹುದು. ಆದರೆ, ಆಹಾರ ಉತ್ಪನ್ನ ಬೆಳೆಯಲು ವ್ಯವಸಾಯ ಬಿಟ್ಟರೆ ಪರ್ಯಾಯ ವ್ಯವಸ್ಥೆ ಇಲ್ಲ. ವ್ಯವಸಾಯವನ್ನು ಕಾಯಕವನ್ನಾಗಿಸಿಕೊಂಡು ಭೂಮಿಯ ಮೇಲಿನ ಕೋಟ್ಯಂತರ ಜನರ ಹಸಿವನ್ನು ನೀಗಿಸುವ ಮಹೋನ್ನತ ಕೆಲಸವನ್ನು ರೈತರು ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯ ಬದುಕು ಇಂದು ನಾನಾ ಅನಿಶ್ಚಿತತೆಗಳಿಂದ ಕೂಡಿರುವುದು ದುರದೃಷ್ಟಕರ ಎಂದರು.

ಮೊದಲಿನಿಂದಲೂ ಎಲ್ಲ ಸರ್ಕಾರಗಳು ರೈತನ ಬೆಂಬಲಕ್ಕೆ ನಿಂತಿದ್ದು, ಅದರಲ್ಲೂ ಮಾಜಿ ಪ್ರಧಾನ ಮಂತ್ರಿ ಚೌದರಿ ಚರಣ್ ಸಿಂಗ್ ರೈತರ ಶ್ರೇಯೋಭಿವೃದ್ಧಿಗೆ ಕೈಗೊಂಡ ಸುಧಾರಣೆಗಳು ಚರಿತ್ರಾರ್ಹವಾಗಿವೆ. ಪ್ರಸ್ತುತ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು. ಜಿಪಂ ಸಿಇಒ ಪಿ.ಶಿವಶಂಕರ್ ವಾತನಾಡಿ, ಪರಿಣಾಮಕಾರಿ ಕೃಷಿಗೆ ನೀರಾವರಿ ಸೌಲಭ್ಯ ಪ್ರಮುಖವಾದುದು. ಇದಕ್ಕೆ ರೈತರು ಜಲಸಂರಕ್ಷಣೆಯ ಕ್ರಮಗಳನ್ನು ಅನುಸರಿಸಬೇಕು. ಸಮಗ್ರ ಕೃಷಿ ಚಟುವಟಿಕೆಯ ಮೂಲಕ ಆದಾಯ ಹೆಚ್ಚಿಸಬೇಕು ಎಂದು ಹೇಳಿದರು.

ಪ್ರಗತಿಪರ ರೈತರಿಗೆ ಸನ್ಮಾನ:

ಸಮಗ್ರ ಕೃಷಿ ಪದ್ದತಿಯಲ್ಲಿ ಹೆಸರುಗಳಿಸಿರುವ ನಲ್ಲರಾಳ್ಳಹಳ್ಳಿಯ ಯರ‌್ರಪ್ಪ, ಉದಗಿರಿನಲ್ಲಪ್ಪನಹಳ್ಳಿಯ ಲಕ್ಷ್ಮಮ್ಮ, ನಲ್ಲಕದಿರೇನಹಳ್ಳಿಯ ಮುರಳಿ ಮನೋಹರ್, ಸೊಪ್ಪಹಳ್ಳಿಯ ಸಾಯಿಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಜಂಟಿ ಕೃಷಿ ನಿರ್ದೇಶಕಿ ಜಾವಿದಾ ನಾಸೀಮಾ ಖಾನಂ, ಕೃಷಿ ಇಲಾಖೆ ಉಪನಿರ್ದೇಶಕ ಎಚ್.ಎಲ್.ಚಂದ್ರ ಕುಮಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಎಂ.ಗಾಯತ್ರಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಆಂಜನೇಯಗೌಡ, ಜಿಲ್ಲಾ ಕೃಷಿ ಸವಾಜದ ಅಧ್ಯಕ್ಷ ಎನ್. ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಇದ್ದರು.

ರೈತರೊಂದಿಗೆ ಸಂವಾದ

ಮಣ್ಣಿನ ಪರೀಕ್ಷೆ, ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರಗಳ ಬಳಕೆ, ರೋಗಗಳು ಮತ್ತು ಕೀಟ ಸಮಸ್ಯೆಗಳ ನಿಯಂತ್ರಣ, ಕೃಷಿ ಸಂಶೋಧನೆ, ತಾಂತ್ರಿಕತೆ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಕೃಷಿ ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸಿದರು. ದೇಶದ ಪ್ರಗತಿಪರ ರೈತರು, ಸಾಧನೆಗಳು, ಕೃಷಿಯ ಅಭಿವೃದ್ಧಿ, ಸರ್ಕಾರದಿಂದ ಸಿಗುವ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಸವಲತ್ತುಗಳ ಬಗ್ಗೆ ವಾಹಿತಿ ನೀಡಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟ ಶಾಸ್ತ್ರಜ್ಞ ಶ್ರೀನಿವಾಸ್ ರೆಡ್ಡಿ, ಚಿಂತಾಮಣಿಯ ಕುರಬೂರು ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಅಕ್ಷತಾ, ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ಬೇಸಾಯ ಶಾಸ್ತ್ರಜ್ಞ ಶಿವಕುವಾರ್ ಉತ್ತಮ ಕೃಷಿ ಪದ್ದತಿ ಹಾಗೂ ನಿರ್ವಹಣೆಯ ಬಗ್ಗೆ ತಿಳಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net