

ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಡಿ.31 ರಂದು ಬೆಳಗ್ಗೆ 11ಕ್ಕೆ ನಗರದ ಕಲಾಮಂದಿರದಲ್ಲಿ ವಿಶ್ವ ರೈತ ದಿನಾಚರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೌರವಾಧ್ಯಕ್ಷ ಪ್ರೊ.ಎಸ್. ಶಿವರಾಜಪ್ಪ ಹೇಳಿದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಿಸಿದ ವಿಚಾರಗೋಷ್ಠಿ, ವಿಶೇಷ ಉಪನ್ಯಾಸ, ಸಂವಾದ, ಕೃಷಿ ಉತ್ಪಾದನೆ ಮಾರಾಟ, ರೈತರ ಆರ್ಥಿಕಾಭಿವೃದ್ಧಿ, ರೈತರ ಬೆಳೆಗಳಿಗೆ ಬಾಧಿಸುವ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಪರಿಹಾರ ಮೊದಲಾದ ವಿಷಯಗಳ ಕುರಿತು ಚಿಂತನ ಮಂಥನ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಪ್ರೊ.ಮಹದೇವಯ್ಯ, ಅತ್ತಳ್ಳಿ ಸ್ವಾಮಿರಾಜ್, ಹಾಡ್ಯ ರವಿ, ಎಚ್. ಹನುಮಯ್ಯ, ಕೆರೆಹುಂಡಿ ರಾಜಣ್ಣ, ಶಿವರುದ್ರಪ್ಪ ಹಾಗೂ ಇತರರು ಇದ್ದರು.