

ಹಾನಗಲ್ಲ: ಪ್ರಸಕ್ತ ಸಾಲಿನ ಮುಂಗಾರು ಬೆಳೆ ಸಮೀಕ್ಷೆಗೆ ರೈತರ ಬೆಳೆ ಸಮೀಕ್ಷೆ ಆಪ್ ಬಿಡುಗಡೆ ಮಾಡಲಾಗಿದೆ. ಆಪ್ ಬಳಸಿಕೊಂಡು ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆ ಮಾಡಿ, ವಿವರ ಅಪ್ಲೋಡ್ ಮಾಡಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ. ಮೋಹನಕುಮಾರ ತಿಳಿಸಿದ್ದಾರೆ.
ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ, ಕೃಷಿ ಸಾಲ ಸೌಲಭ್ಯ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ರೈತರಿಗೆ ಸವಲತ್ತು ಒದಗಿಸಲು ಮತ್ತು ಆರ್ಟಿಸಿಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಲಾಗುತ್ತದೆ. ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ರೈತರ ಬೆಳೆ ಸಮೀಕ್ಷೆ 2023-24 ಎಂದು ಟೈಪ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ತಮ್ಮ ಆಧಾರ ಕಾರ್ಡ್ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಾಯಿಸಿಕೊಂಡು ತಮ್ಮ ಜಮೀನಿನ ವಿವರ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರ ತೆಗೆದು ಅಪ್ಲೋಡ್ ಮಾಡಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.