13ರಂದು ರೈತ ಬೃಹತ್ ಸಮಾವೇಶ

08 CRP 02 (1)
Published on

ಚನ್ನರಾಯಪಟ್ಟಣ: ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವ ಮೂಲಕ ರೈತ ವರ್ಗವನ್ನು ಸದೃಢಗೊಳಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಫೆ.13ರಂದು ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ವೈ. ಪ್ರವೀಣ್ ತಿಳಿಸಿದರು.

ಖಾಸಗೀಕರಣ, ಉದಾರೀಕರಣದ ಫಲ ರೈತನ ಬದುಕು ಮೂರಾಬಟ್ಟೆಯಾಗಿದೆ, ರೈತ ವರ್ಗವನ್ನು ಉಳಿಸುವ ಕೆಲಸ ಯಾವ ಪಕ್ಷಗಳಿಂದಲೂ ಆಗುತ್ತಿಲ್ಲ. ರೈತನೇ ಎಚ್ಚೆತ್ತುಕೊಳ್ಳಬೇಕಿದ್ದು, ಮೈ ಮರೆತರೆ ರೈತ ಸಮುದಾಯ ಸಂಪೂರ್ಣ ನಾಶವಾಗುವ ದಿನಗಳು ದೂರವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತನ ಕಷ್ಟ, ನೋವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಸನ ಜಿಲ್ಲೆ ರೈತ ಸಂಘದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತಿದ್ದು, ಪಟ್ಟಣದ 40 ಅಡಿ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ರಾಜ್ಯ ರೈತ ಸಂಘದ ಸ್ಥಾಪಕರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಬೃಹತ್ ರ‌್ಯಾಲಿ ಹಾಗೂ ರೈತ ಸಮಾವೇಶವನ್ನು ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ರಾಜ್ಯದ 7 ಪ್ರಗತಿಪರ ರೈತರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ವಕ್ತಾರ ಗಿರಿಧರ್, ತಾಲೂಕು ಅಧ್ಯಕ್ಷ ಶಂಕರಣ್ಣ ಹಾಗೂ ಹೊಳೆನರಸೀಪುರ ತಾಲೂಕು ರೈತ ಸಂಘದ ಅಧ್ಯಕ್ಷ ಮಹದೇವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net