ದೆಹಲಿಯಲ್ಲಿ ಮಾ.14 ರಂದು ರೈತ ಸಮಾವೇಶ : ಬಡಗಲಪುರ ನಾಗೇಂದ್ರ

mysore
Published on

ಮೈಸೂರು: ಕೇಂದ್ರ ಸರ್ಕಾರ ರೈತರ ಮೇಲೆ ನಡೆಸಿರುವ ದೌರ್ಜನ್ಯ ಖಂಡಿಸಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಕಾನೂನು ಖಾತ್ರಿಗೊಳಿಸಲು ಆಗ್ರಹಿಸಿ ಮಾ.14ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ದಿಂದ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷ ಆಡಳಿತವನ್ನು ಪೂರೈಸುತ್ತಿದ್ದು, ಸರ್ಕಾರ ರೈತರಿಗೆ ನೀಡಿದ ಭರವಸೆ ಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 1.50 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಂಕಷ್ಟಗಳನ್ನು ಬಗೆ ಹರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿ ಮತ ಪಡೆದ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಯಾವುದೇ ಆಲೋಚನೆ ಮಾಡದೆ ಕೃಷಿ ಉತ್ಪನ್ನಗಳ ವೆಚ್ಚ ದ್ವಿಗುಣಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುಡಿಯುವ ರೈತರ ಸಾಲ ಮನ್ನಾ ಮಾಡಿದರೆ ಖಜಾನೆ ಖಾಲಿಯಾಗುತ್ತದೆ ಎಂದು ಹೇಳುವ ನರೇಂದ್ರ ಮೋದಿ ಅವರು ತಮ್ಮ 10 ವರ್ಷದ ಆಡಳಿತದಲ್ಲಿ ಕಾರ್ಪೋರೇಟ್ ಕಂಪನಿಗಳ 20 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. 2 ಕೋಟಿ ಯುವಜನರಿಗೆ ಉದ್ಯೋಗ ನೀಡುತ್ತೇನೆಂದು ಹೇಳಿದ ನರೇಂದ್ರ ಮೋದಿ ಇರುವ ಉದ್ಯೋಗವನ್ನೇ ಕಡಿತಗೊಳಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಪ್ರಸನ್ನ ಎನ್. ಗೌಡ, ಪಿ.ಮರಂಕಯ್ಯ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net