ಅರಣ್ಯ ಇಲಾಖೆ ತೆಗೆದಿದ್ದ ಕಂದಕ ಮುಚ್ಚಿದ ರೈತರು

ಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ರೈತರಿಗೆ ಮಂಜೂರಾಗಿದ್ದ ಭೂಮಿ ಮಧ್ಯದಲ್ಲೆ ಅರಣ್ಯ ಇಲಾಖೆಯವರು ತೆಗೆದಿದ್ದ ಕಂದಕವನ್ನು ಸಾಮೂಹಿಕವಾಗಿ ಮುಚ್ಚಿದ ರೈತರು. ವಿರೂಪಾಕ್ಷ, ಸಿದ್ದಮಲ್ಲಪ್ಪ, ಪುಟ್ಟಸ್ವಾಮಿಗೌಡ, ಜಯಣ್ಣ, ಗಂಗಾಧರ, ನಾಗೇಗೌಡ, ಗಣೇಶ, ಕಿರಣ, ಮಲ್ಲೇಶ್, ಯೋಗೇಶ್, ಶಿವೇಗೌಡ, ಶಿವಪ್ಪ  ಇತರರಿದ್ದರು.
ಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ರೈತರಿಗೆ ಮಂಜೂರಾಗಿದ್ದ ಭೂಮಿ ಮಧ್ಯದಲ್ಲೆ ಅರಣ್ಯ ಇಲಾಖೆಯವರು ತೆಗೆದಿದ್ದ ಕಂದಕವನ್ನು ಸಾಮೂಹಿಕವಾಗಿ ಮುಚ್ಚಿದ ರೈತರು. ವಿರೂಪಾಕ್ಷ, ಸಿದ್ದಮಲ್ಲಪ್ಪ, ಪುಟ್ಟಸ್ವಾಮಿಗೌಡ, ಜಯಣ್ಣ, ಗಂಗಾಧರ, ನಾಗೇಗೌಡ, ಗಣೇಶ, ಕಿರಣ, ಮಲ್ಲೇಶ್, ಯೋಗೇಶ್, ಶಿವೇಗೌಡ, ಶಿವಪ್ಪ ಇತರರಿದ್ದರು.
Published on

ಬೇಲೂರು: ರೈತರು ಹಾಗೂ ಅರಣ್ಯ ಇಲಾಖೆ ನಡುವಿನ ಭೂ ವಿವಾದ ತಾರಕಕೇರಿದ್ದು, ಭೂಮಿ ವಶಕ್ಕೆಂದು ಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ತೆಗೆದಿದ್ದ ಕಂದಕವನ್ನು ಗ್ರಾಮಸ್ಥರು ಸಾಮೂಹಿಕವಾಗಿ  ಮುಚ್ಚಿದ್ದಾರೆ.

ತಾಲೂಕಿನ ಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ರೈತರಿಗೆ ಮಂಜೂರಾಗಿದ್ದ ಭೂಮಿ ಅರಣ್ಯ ಇಲಾಖೆಗೆ ಸೇರಿದೆಂದು ಇಲಾಖೆಯಿಂದ ಸರಹದ್ದು ಗುರುತಿಸಿ ರೈತರ ಜಮೀನಿನ ಮಧ್ಯ ಭಾಗದಲ್ಲಿಯೇ ಶುಕ್ರವಾರ ಬೆಳಗ್ಗೆಯಿಂದ ರಾತ್ರಿವರೆಗೂ ದೊಡ್ಡ ಕಂದಕದ ಕಾಲುವೆ ನಿರ್ಮಿಸಿದ್ದರು. ಆದರೆ ಶನಿವಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗ್ರಾಮದ ಮಹಿಳೆಯರು, ರೈತರು ಸೇರಿ ಕಂದಕವನ್ನು ಮುಚ್ಚಿದ್ದಾರೆ.

ರೈತರೆಲ್ಲರೂ ಕೈಯಲ್ಲಿ ಕೆಪಿಆರ್‌ಎಸ್ ಬಾವುಟ ಹಿಡಿದು ಕೆಲ ಹೊತ್ತು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ತಾವೇ ಕಾಲುವೆಗೆ ಮಣ್ಣು ತುಂಬಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್ ಮಾತನಾಡಿ, ಬೇಲೂರು ತಾಲೂಕಿನ ಅಡವಿ ಬಂಟೇನಹಳ್ಳಿ ಗ್ರಾಮದಲ್ಲಿ ರೈತರ ಕೃಷಿ ಭೂಮಿಯ ಮಧ್ಯ ಭಾಗದಲ್ಲಿ ಟ್ರಂಚ್ ತೆಗೆದಿದ್ದಾರೆ. ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಂದಕವನ್ನು ರೈತರೆಲ್ಲ ಸೇರಿ ಮುಚ್ಚಿದ್ದೇವೆ. ಜತೆಗೆ ಗ್ರಾಮಕ್ಕೆ ಸೇರಿದ ಗೋಮಾಳ ಮತ್ತು ರೈತರು ಸಾಗುವಳಿ ಮಾಡುತ್ತಿರುವ ಭೂಮಿಗೆ ಕಂದಾಯ ಇಲಾಖೆ ಹಕ್ಕುಪತ್ರ ನೀಡಿದ್ದು, ಪಹಣಿಯಲ್ಲಿ ಅರ್ಹರ ಹೆಸರು ಬರುತ್ತಿದೆ. ಈ ಭೂಮಿಯನ್ನೇ ಅರಣ್ಯ ಇಲಾಖೆ ತಮಗೆ ಸೇರಿದ್ದು ಎನ್ನುವ ವಾದದೊಂದಿಗೆ ಬಲವಂತವಾಗಿ ತೆರವುಗೊಳಿಸಲು ಮುಂದಾಗಿದ್ದಾರೆ. ರೈತ ವಿರೋಧಿ ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ, ರೈತರು ತಮ್ಮ ಭೂಮಿಯಲ್ಲಿ ತೆಗೆದಿದ್ದ ಕಂದಕವನ್ನು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮುಚ್ಚಿದ್ದೇವೆ. ಕೂಡಲೇ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ ಅರ್ಹ ರೈತರಿಗೆ ಭೂಮಿಯ ಹಕ್ಕನ್ನು ಉಳಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಅಡವಿ ಬಂಟೆನಹಳ್ಳಿ ಗ್ರಾಮದ ವಿರೂಪಾಕ್ಷ, ಸಿದ್ದಮಲ್ಲಪ್ಪ, ಪುಟ್ಟಸ್ವಾಮಿಗೌಡ, ಜಯಣ್ಣ, ಗಂಗಾಧರ, ನಾಗೇಗೌಡ, ಗಣೇಶ, ಕಿರಣ, ಮಲ್ಲೇಶ್, ಯೋಗೇಶ್, ಶಿವೇಗೌಡ, ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net