

ನಂಜನಗೂಡು: ಇತ್ತೀಚಿಗೆ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರ ಕೇಳಲು ಬೇಸರವಾಗುತ್ತಿದೆ ಎಂದು ಕಂತೆ ಮಹದೇಶ್ವರ ಬೆಟ್ಟದ ಮಠಾಧ್ಯಕ್ಷ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ತರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ತರಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರೇ ಹೆಚ್ಚಾಗಿ ಇರುವ ಕಾರಣ ರೈತ ಸಂಘಟನೆಗಳು ಅವಶ್ಯಕವಾಗಿವೆ. ರೈತರು ಚೆನ್ನಾಗಿದ್ದರೆ ಮಾತ್ರ ದೇಶ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯ. ಪ್ರತಿ ಗ್ರಾಮದಲ್ಲೂ 50ಕ್ಕೂ ಹೆಚ್ಚು ಗಂಡು ಮಕ್ಕಳು ಹೆಣ್ಣು ಸಿಗದೇ ಮದುವೆಯಾಗಿಲ್ಲ. ರೈತರಾದ ನೀವು ಕೂಡ ರೈತರ ಮಕ್ಕಳಿಗೆ ಹೆಣ್ಣು ಕೊಡಬೇಕು ಎಂದು ಸಲಹೆ ನೀಡಿದರು.
ಹಿರಿಯ ಹೋರಾಟಗಾರ ಹೊನ್ನೂರು ಪ್ರಕಾಶ್ ಮಾತನಾಡಿ, ರೈತ ಸಂಘಟನೆ ಎಂದರೆ ಒಂದು ಪಾಠಶಾಲೆ ಇದ್ದಹಾಗೆ. ನಮ್ಮ ದೇಶದಲ್ಲಿ 75 ಭಾಗ ರೈತರೇ ಇದ್ದರೂ ಕೂಡ ಇನ್ನು ಆರ್ಥಿಕವಾಗಿ ಸುಧಾರಣೆಯಾಗಿಲ್ಲ. ಈ ಹಿಂದೆ ಸರ್ಕಾರಗಳು ಏನನ್ನು ಕೊಡದಿದ್ದರೂ ಕೂಡ ಚೆನ್ನಾಗಿಯೇ ಇದ್ದವು. ಆದರೆ ಇಂದು ಸರ್ಕಾರ ಎಲ್ಲವನ್ನೂ ಕೊಡ್ತೀವಿ ಅಂತ ಹೇಳುತ್ತಿದ್ದರೂ ಕೂಡ ರೈತರು ಸದೃಢರಾಗಿಲ್ಲ. ರೈತರು ಮೊದಲು ಕಾನೂನನ್ನು ತಿಳಿದುಕೊಳ್ಳಬೇಕು. ರೈತರು ಸರ್ಕಾರಗಳನ್ನು ಪ್ರಶ್ನೆ ಮಾಡುವವರೆಗೆ ಉದ್ಧಾರ ಆಗುವುದಿಲ್ಲ. ನಾವು ಬೆಳೆದ ಬೆಳೆ ಮಾರಾಟ ಮಾಡುವ ಜತೆಗೆ ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚಿಗೆ ಸರ್ಕಾರ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿ ಸಾರ್ವಜನಿಕರನ್ನು ಕಷ್ಟದ ಸ್ಥಿತಿಗೆ ದೂಡುವ ಹುನ್ನಾರ ನಡೆಸುತ್ತಿದೆ. ಪ್ರತಿಯೊಂದನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ. ಇವೆಲ್ಲವನ್ನು ಮನದಲ್ಲಿ ಇಟ್ಟುಕೊಂಡು ಹೋರಾಟ ನಡೆಸಿ ಸಂಘಟಿತರಾದರೆ ಮಾತ್ರ ರೈತರಿಗೆ ಉಳಿಗಾಲ ಎಂದರು.
ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡಿಸಲು ಪ್ರಮುಖ ಕಾರಣ ಸಂಘಟನೆ. ಹಾಗೂ ಪ್ರೊ.ನಂಜುಂಡಸ್ವಾಮಿ ಅವರ ಹೋರಾಟ ಕಾರಣ. ಶೇ.45 ಸರ್ಕಾರಿ ನೌಕರರು ಸಂಬಳ ತೆಗೆದುಕೊಳ್ಳುತ್ತಿರುವುದು ರೈತರು ಬೆಳೆದ ಉತ್ಪನ್ನಗಳಿಂದಲೇ. ರೈತರು ಜಾತಿ ವ್ಯವಸ್ಥೆಯಿಂದ ಹೊರಬರಬೇಕು. ಸಂಘಟಿತ ಹೋರಾಟದಿಂದ ಮಾತ್ರ ರೈತ ಸಂಘಗಳು ಬೆಳೆಯುತ್ತಿವೆ ಎಂದರು.
ನೂರಾರು ರೈತರು ಸಂಘಟನೆಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್, ಸಂಘದ ಅಧ್ಯಕ್ಷ ರಾಜಪ್ಪ, ಉಪಾಧ್ಯಕ್ಷ ಚೆನ್ನಪ್ಪಾಜಿ ನಾಯಕ, ಮಹದೇವ ಪ್ರಸಾದ್, ನಟರಾಜು, ಗೌಡಿಕೆ ಶಿವಕುಮಾರ್, ಕಾಮನಾಯ್ಕ, ರಾಚನ ಸಿದ್ದಯ್ಯ, ಸತೀಶ್, ಸಿರಮಳ್ಳಿ ರತ್ನಮ್ಮ, ಸಿಂಧುವಳ್ಳಿ ವೇಣುಗೋಪಾಲ್, ಪ್ರಶಾಂತ್ ಕುಮಾರ್, ಬಸವರಾಜು, ಕುಮಾರ್ ನಾಯಕ, ಚೆನ್ನನಾಯಕ, ವರದನಾಯಕ, ಮಂಜು ನಾಯಕ,ಸತೀಶ್ ಆಚಾರ್ಯ, ಶಿವನಾಗಪ್ಪ, ಮಹದೇವಸ್ವಾಮಿ, ಪ್ರಸನ್ನ ನಾಯಕ, ಅಪ್ಪು, ಮಣಿಕಂಠ ಸೇರಿದಂತೆ ಗ್ರಾಮಸ್ಥರು ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.