

ಚಿಕ್ಕಮಗಳೂರು: ಈ ಬಾರಿಯ ಸರಳ ದೀಪಾವಳಿ ಕರೊನಾ ಆತಂಕದ ನಡುವೆಯೂ ಮನೆ-ಮನಗಳಲ್ಲಿ ಸಂಭ್ರಮ ಹೆಚ್ಚಿಸಿದ್ದು ರೈತರ ಪಾಲಿಗೆ ಇದೊಂದು ಸಾಂಪ್ರದಾಯಿಕ ಹಬ್ಬವಾಗಿದೆ ಎಂದು ಸ್ಥಳೀಯ ಮುಖಂಡ ಕೋಟೆ ರಂಗನಾಥ್ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ನಗರದ ಕೋಟೆ ಬಡಾವಣೆಯಲ್ಲಿ ಶನಿವಾರ ದೀಪಾವಳಿ ಅಂಗವಾಗಿ ಲಕ್ಕೆ ಹಬ್ಬದ ಸಂಭ್ರಮದಲ್ಲಿ ತಮ್ಮ ಜಮೀನಿನಲ್ಲಿ ಭೂಮಿಪೂಜೆ ಬಳಿಕ ಫಸಲು ಹಿಡಿದು ದೇವರಿಗೆ ಸಮರ್ಪಿಸಿ ಕೋಟೆ ಬಡಾವಣೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಾತನಾಡಿದರು.
ಪರಿಸರ ಮಾಲಿನ್ಯ ರಹಿತ ಹಬ್ಬ
ದೀಪಾವಳಿಯು ಪ್ರತಿ ಬಾರಿಯ ಆಚರಣೆ ತಡೆಯಾಗಿದ್ದರೂ ಸಂಪ್ರದಾಯಬದ್ಧವಾಗಿ ಎಂದಿನಂತೆ ಸರಳವಾಗಿ ಪರಿಸರ ಮಾಲಿನ್ಯ ರಹಿತವಾಗಿ ಹಬ್ಬವನ್ನು ಆಚರಣೆ ಮಾಡಲಾಗುವುದು. ವಿಶೇಷವಾಗಿ ರೈತರು ದವಸ ಧಾನ್ಯಗಳನ್ನು ಬೆಳೆಯುವ ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬದ ಮೆರುಗು ಹೆಚ್ಚಲಿದೆ. ಮುಖ್ಯವಾಗಿ ಕೋಟೆ ಗ್ರಾಮ, ಹಿರೇಮಗಳೂರು, ದೋಣಿಖಣ ಗ್ರಾಮಸ್ಥರಿಗೆ ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದರು.
ಸ್ಥಳೀಯ ಪ್ರಮುಖರಾದ ಯತಿರಾಜ್ ನಾಯ್ಡು, ಭುಜಂಗರಾಜ್ ಅರಸ್, ಕೋಟೆ ಕುಮಾರ್, ಸರೋಜಾ ಬಸವರಾಜ್, ನಾಗೇಶ್, ನಟರಾಜ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.