ಬಾಣಲೆಯಿಂದ ಬೆಂಕಿಗೆ ಬಿದ್ದ ಬೆಳೆಗಾರರು

IMG_20250615_090753
module: a; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 115.0; hist255: 0.0; hist252~255: 0.0; hist0~25: 0.0;
Published on

ಮುಳಬಾಗಿಲು: ಹಣ್ಣುಗಳು ಮತ್ತು ತರಕಾರಿ ಬೆಳೆದ ರೈತರಿಗೆ ಕಳೆದ ಒಂದು ವರ್ಷದಿಂದ ಉತ್ತಮ ಮಾರುಕಟ್ಟೆ ಸಿಗದೆ, ಬೆಲೆಯೂ ಇಲ್ಲದೆ ಪರಿತಪಿಸುವಂತಾಗಿದ್ದು, ಹಾಕಿದ ಬಂಡವಾಳವೂ ಕೈ ಸೇರದೆ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸ್ತುತ ಋತುವಿನಲ್ಲಿ ವಾಣಿಜ್ಯ ಬೆಳೆಯಾದ ಮಾವು ಸಲು ಉತ್ತಮವಾಗಿ ಬಂದಿದ್ದರೂ, ಬೆಳೆಗೆ ತಕ್ಕಂತೆ ಬೆಲೆ ಸಿಗದೆ ತೋಟದಲ್ಲೇ ಹಣ್ಣಾಗಿ ಕೊಳೆಯುವಂತಾಗಿದೆ. ಬೆಂಬಲ ಬೆಲೆಗೆ ಒತ್ತಾಯಿಸಿ ಹಲವು ಹೋರಾಟಗಳ ನಂತರ ಎಚ್ಚೆತ್ತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರಿಂದ ಈಗ ಎಪಿಎಂಸಿ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಖರೀದಿಗೆ ಮುಂದಾಗಿದ್ದು, ಇಲ್ಲಿ ಅಳವಡಿಸಿರುವ ನಿಯಮಗಳೇ ಮಾವು ಬೆಳೆಗಾರನಿಗೆ ಮತ್ತಷ್ಟು ಇಕ್ಕಟ್ಟು ಸೃಷ್ಟಿಸಿದೆ.

ಕೇಂದ್ರ ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಲು ಮಾವು ಅಭಿವೃದ್ಧಿ ಮಂಡಳಿಗೆ 101 ಕೋಟಿ ರೂ. ಬಿಡುಗಡೆ ಮಾಡಿ, ತದನಂತರ ಶೇ.50ಮೊತ್ತವನ್ನು ಕೇಂದ್ರ ಸರ್ಕಾರದಿಂದ ಮರುಪಾವತಿ ಪಡೆಯಲು ಷರತ್ತುಗಳನ್ನು ವಿಧಿಸಿದೆ. ಇದನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರೈತರಿದ್ದು, ಪಹಣಿಯಲ್ಲಿ ರೈತನ ಹೆಸರು, ಜತೆಗೆ ಮಾವಿನ ಬೆಳೆ ಒಂದೇ ದಾಖಲಾಗಿರಬೇಕು. ಪಹಣಿಯಲ್ಲಿ ಮಾವು ಜತೆಗೆ ತೊಗರಿ, ಅಲಸಂದೆ, ಅವರೆ ಮತ್ತಿತರ ಮಿಶ್ರ ಬೆಳೆಗಳು ದಾಖಲಾಗಿದ್ದರೆ, ಖರೀದಿ ನೋಂದಣಿ ಅಧಿಕಾರಿಗಳು ಬೆಂಬಲ ಬೆಲೆ ನೀಡಲು ನಿರಾಕರಿಸುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಬೆಳೆ ದಾಖಲು ಮಾಡುತ್ತಿರುವುದು, ರೈತರು ಸಹ ಪಹಣಿ ನೋಡಿಕೊಳ್ಳದೆ ಇರುವುದು ಇಂತಹ ಸಮಯದಲ್ಲಿ ಅಡಕತ್ತರಿಗೆ ಸಿಕ್ಕಿಸುತ್ತಿದೆ.

ಯೋಜನೆಯಡಿ ಪ್ರತಿ ಎಕರೆಗೆ 20 ಕ್ವಿಂಟಾಲ್​ನಂತೆ ಒಬ್ಬ ರೈತನಿಂದ ಗರಿಷ್ಠ 5 ಎಕರೆಗೆ 100 ಕ್ವಿಂಟಾಲ್​ ಖರೀದಿಗೆ ಮಿತಿಗೊಳಿಸಿರುವುದು, ಒಂದು ಟನ್ನಿಗೆ ಎಂಐಪಿ ದರ 1,616 ರೂ. ನಿಗದಿ ಮಾಡಿದ್ದು, ಇದರಲ್ಲಿ ಶೇ 25 ಪ್ರವೇಶ ದರದಂತೆ ಅಂದರೆ ಕೆಜಿಗೆ ಕೇವಲ 4 ರೂ. ನಂತೆ ಖರೀದಿ ಬೆಲೆ ನಿಗದಿಪಡಿಸಲಾಗಿದೆ. ಇದು ಮಾವು ಕೀಳುವ ಕೂಲಿಗೂ ಸಾಕಾಗುವುದಿಲ್ಲ ಎನ್ನಲಾಗುತ್ತಿದೆ.

ಮಾವು ಕೀಳಲು ಒಬ್ಬ ಕೂಲಿಯಾಳಿಗೆ ದಿನಕ್ಕೆ 700 ರೂ. ನೀಡಬೇಕು, ಇನ್ನು ಟ್ರಾ$್ಯಕ್ಟರ್​ ಬಾಡಿಗೆ, ಗಾಡಿಗೆ ತುಂಬುವ ಕೂಲಿ, ಎಪಿಎಂಸಿಗೆ ತಂದು ನಂತರ ವೇ ಬ್ರಿಡ್ಜ್​ಗೆ ಹೋಗಿ ತೂಕ ಕಾಕಿಸಿಕೊಂಡು ರಸೀದಿ ತಂದುಕೊಡುವ ಜವಾಬ್ದಾರಿ ರೈತನದಾಗಿದೆ. ಸರ್ಕಾರ ಕೊಡುವ ಪರಿಹಾರಕ್ಕಿಂತ ರೈತನಿಗೇ ಹೆಚ್ಚು ಖರ್ಚು ತಗಲುತ್ತದೆ. ಇದೆಲ್ಲದ ಬದಲು ಬೆಳೆ ಗಿಡದಲ್ಲೇ ಬಿಡಲಾಗುತ್ತಿದೆ.

ಪರಿಹಾರಗಳೇನು?

ರೈತನ ತೋಟಕ್ಕೆ ಗ್ರಾಮ ಪಂಚಾಯಿತಿವಾರು ಅಧಿಕಾರಿಗಳು ಭೇಟಿ ನೀಡಿ ರೈತನ ಖಾತೆಗೆ ಸರ್ಕಾರ ಪರಿಹಾರ ನೀಡಿದರೆ ಒಂದಷ್ಡು ನಷ್ಟ ಕಡಿಮೆ ಮಾಡಬಹುದು. ಅದು ಬಿಟ್ಟು ಮತ್ತಷ್ಟು ಖರ್ಚು ಮಾಡಿಸುವ ಯೋಜನೆಗಳನ್ನು ಕೈ ಬಿಟ್ಟು ರೈತರ ಹಿತ ಕಾಪಾಡಲು, ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತರಬೇಕಿದೆ.

ನೋಂದಣಿಗೆ ಬಂದಾಗ ಪಹಣಿಯಲ್ಲಿ ಮಾವಿನ ಜತೆಗೆ ಬೇರೆ ಬೆಳೆಗಳು ದಾಖಲಾಗಿರುವುದರಿಂದ ವಾಪಸ್​ ಕಳಿಸಿದ್ದಾರೆ. ಬೆಳೆ ಬೆಳೆದ ತಪ್ಪಿಗೆ ಪರಿಹಾರ ಪಡೆಯಲು ಕಚೇರಿಗಳಿಗೆ ಅಲೆಯುವ ಭಾಗ್ಯ ಸರ್ಕಾರ ನೀಡಿದೆ.

- ಶ್ರೀನಿವಾಸ್​

ಕನ್ನತ ಗ್ರಾಮದ ಮಾವು ಬೆಳೆಗಾರ

ಪಹಣಿಯಲ್ಲಿ ಬೆಳೆ ಸಮೀಕ್ಷೆ ದಾಖಲಾಗದವರ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎರಡು ಪ್ರತ್ಯೇಕ ವರದಿ ನೀಡಲಾಗುವುದು. ರೈತರು ಮಾವು ತುಂಬಿಕೊಂಡು ಬರುವ ವಾಹನಗಳಿಗೆ ಟೋಕನ್​ ವಿತರಿಸಿ ತೂಕದ ನಂತರ ಮತ್ತೊಮ್ಮೆ ದಾಖಲೆ ಮಾಡಿಕೊಂಡು ಬೆಳೆಯನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

- ಎಸ್​. ರಮೇಶ್​

ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಮುಳಬಾಗಿಲು

ರೈತರಿಗೆ ಮಾವಿನ ತೋಟದ ವಿಸ್ತೀರ್ಣದಂತೆ ಫಸಲನ್ನು ನಿಗದಿ ಮಾಡಿ ಪರಿಹಾರ ನೀಡಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮಾಹಿತಿ ದಾಖಲು ಮಾಡಿಕೊಂಡು ಪರಿಹಾರ ವಿತರಣೆ ವ್ಯವಸ್ಥೆ ಮಾಡಿದರೆ ಮಾತ್ರ ರೈತ ಮಾಡಿರುವ ಖರ್ಚಿನಲ್ಲಿ ಒಂದಷ್ಟು ನಷ್ಟ ಕಡಿಮೆ ಮಾಡಬಹುದು.

- ಏತ್ತೂರಹಳ್ಳಿ ಕೆ.ಸತೀಶ್​ ಕುಮಾರ್​

ತಾಲೂಕು ಪ್ರಧಾನ ಕಾರ್ಯದರ್ಶಿ, ಭಾರತೀಯ ಕಿಸಾನ್​ ಸಂಘ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net