ಬಿತ್ತನೆಯಲ್ಲಿ ಮಗ್ನರಾದ ರೈತರು

3byd-1
Published on

ಬ್ಯಾಡಗಿ: ತಾಲೂಕಿನಾದ್ಯಂತ ಮುಂಗಾರು ಮಳೆ ಅವಧಿಗೂ ಮುನ್ನವೇ ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಮೇನಲ್ಲಿನ 72.4 ಮಿ.ಮೀ. ವಾಡಿಕೆ ಮಳೆ ಪೈಕಿ 151.3 ಮಿ.ಮೀ. ಮಳೆ ಬೀಳುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ಜೂನ್‌ನಲ್ಲಿ 88.7 ಮಿ.ಮೀ. ವಾಡಿಕೆ ಮಳೆ ಬೀಳಬೇಕಿದ್ದು, ಈಗಾಗಲೇ ಮೂರು ದಿನಗಳಲ್ಲಿ 10 ಮಿ.ಮೀ. ಸುರಿದಿದೆ.

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 29,467 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಮೆಕ್ಕೆಜೋಳ 23,550, ಸೋಯಾಬೀನ್ 432, ಹತ್ತಿ 4 ಸಾವಿರ, ಶೇಂಗಾ 616, ಕಬ್ಬು 416 ಹೆಕ್ಟೇರ್, ತೊಗರಿ ಸೇರಿದಂತೆ ಇತರ ದ್ವಿದಳ ಧಾನ್ಯಗಳು 250 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಲಿದೆ. ಕಳೆದ 15 ದಿನಗಳಲ್ಲಿ 8 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಎತ್ತುಗಳಿಂದ ಬೇಸಾಯ ಮಾಡುವುದನ್ನು ಬಹುತೇಕ ರೈತರು ಕೈಬಿಟ್ಟಿದ್ದು, ಬಿತ್ತನೆ, ಔಷಧ ಸಿಂಪಡಣೆ, ಒಕ್ಕಣೆಗೆ ಟ್ರ್ಯಾಕ್ಟರ್ ಹಾಗೂ ಯಂತ್ರಗಳನ್ನೇ ಅವಲಂಬಿಸಿದ್ದಾರೆ.

ಸಿರಿಧಾನ್ಯದತ್ತ ಆಕರ್ಷಣೆ

ಎರಡು ದಶಕಗಳಿಂದ ಸಿರಿಧಾನ್ಯ ಬೆಳೆಯಿಂದ ದೂರು ಉಳಿದಿದ್ದ ರೈತ ಸಮೂಹ ಪುನಃ ಅಲ್ಪ ನೀರು, ಕಡಿಮೆ ಅವಧಿ ಹಾಗೂ ಉತ್ತಮ ದರದಲ್ಲಿ ಮಾರಾಟವಾಗುವ ಸಿರಿಧಾನ್ಯಗಳನ್ನು ಬೆಳೆಯಲು ಮುಂದಾಗಿದ್ದಾರೆ. ರಾಗಿ, ನವಣೆ, ಸಜ್ಜೆ, ಹಾರಕ, ಸಾವೆ ಬೆಳೆಗಳತ್ತ ರೈತರು ಚಿತ್ತ ಹರಿಸಿದ್ದಾರೆ. ಮಾರುಕಟ್ಟೆಯಲ್ಲಿ ರಾಗಿ, ನವಣೆ ಹಾಗೂ ಹಾರಕಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಪ್ರಸಕ್ತ ವರ್ಷ ಬಂಪರ್ ಬೆಲೆ ಸಿಗುವ ನಿರೀಕ್ಷೆ ರೈತರದು. ಸಾಂಪ್ರದಾಯಿಕ ಪದ್ಧತಿಗೆ ಮರಳಿರುವ ಹಲವು ರೈತರು ಬಿತ್ತನೆಗೆ ಮುಂಚೆ ಭೂಮಿಗೆ ಎರೆಹುಳುವಿನ ಗೊಬ್ಬರ, ತಿಪ್ಪೆಗೊಬ್ಬರ, ಸೆಣಬಿನ ಹಸಿರೆಲೆ ಗೊಬ್ಬರ ಸೇರಿಸಿದ್ದಾರೆ.

ರಸಗೊಬ್ಬರ ಕೊರತೆಯಾಗದು

ತಾಲೂಕಿನಲ್ಲಿ ಸಹಕಾರಿ ಸಂಘ ಹಾಗೂ ಖಾಸಗಿ ಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನ ಬೇಡಿಕೆಯಷ್ಟು ಗೊಬ್ಬರ ಪೂರೈಕೆಯಾಗಿದೆ. ಮುಂಗಾರು ಬಿತ್ತನೆಗೆ ಡಿಎಪಿ 2500 ಮೆಟ್ರಿಕ್ ಟನ್ ಬೇಡಿಕೆಯಿದೆ. ಈ ಪೈಕಿ 791 ಮೆಟ್ರಿಕ್ ಟನ್ ವಿತರಣೆಯಾಗಿದ್ದು, 941 ಮೆಟ್ರಿಕ್ ಟನ್ ದಾಸ್ತಾನಿದೆ. ಯೂರಿಯಾ 6500 ಮೆಟ್ರಿಕ್ ಟನ್ ಬೇಡಿಕೆ ಪೈಕಿ 2375 ಟನ್ ವಿತರಣೆಯಾಗಿ, 2480 ಮೆ. ಟನ್ ದಾಸ್ತಾನಿದೆ. ಕಾಂಪ್ಲೆಕ್ಸ್ 2700 ಮೆಟ್ರಿಕ್ ಟನ್ ಬೇಡಿಕೆ ಪೈಕಿ 2200 ಪೂರೈಕೆಯಾಗಿದ್ದು, 1500 ವಿತರಣೆಯಾಗಿದೆ. ಇನ್ನೂ ಮಾರಾಟ ಕೇಂದ್ರಗಳಲ್ಲಿ ಗೊಬ್ಬರ ಅಗತ್ಯವಾದಷ್ಟು ಉಳಿದಿದೆ. ಕಳೆದ ಬಾರಿಯಂತೆ ತಾಲೂಕಿನ 9 ಸಹಕಾರಿ ಸಂಘಗಳಲ್ಲಿ ಗೊಬ್ಬರ ಮಾರಾಟ ನಡೆದಿದೆ. ಇದರೊಂದಿಗೆ 3 ರೈತ ಉತ್ಪಾದಕ ಕಂಪನಿ ಮಾರಾಟ ಕೇಂದ್ರಗಳು, 50 ಖಾಸಗಿ ಆಗ್ರೋಗಳಲ್ಲಿ ಮಾರಾಟ ನಡೆದಿದೆ. ರೈತರಿಗೆ ಸಮರ್ಪಕ ಬೀಜ ಗೊಬ್ಬರ ಪೂರೈಕೆಯಾಗಿದೆ. ಗೊಬ್ಬರ ಮಾರಾಟಗಾರರಿಗೆ ಲಿಂಕ್ ಪ್ಯಾಕೇಟ್‌ಗಳನ್ನು ನೀಡಲು ಇಲಾಖೆ ಸೂಚಿಸಿಲ್ಲ. ರೈತರಿಗೆ ಬೇಡಿಕೆಯಿದ್ದಲ್ಲಿ ಮಾತ್ರ ವಿತರಿಸಲು ತಿಳಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಜೂನ್‌ನಲ್ಲಿ ಅತಿಹೆಚ್ಚು ಮಳೆ ಬೀಳುವುದಾಗಿ ಹವಾಮಾನ ಇಲಾಖೆಯಿಂದ ತಿಳಿಸಿದೆ. ಬ್ಯಾಡಗಿ, ಕಾಗಿನೆಲೆ, ಮೋಟೆಬೆನ್ನೂರ, ಚಿಕ್ಕಬಾಸೂರಲ್ಲಿ ಬಿತ್ತನೆ ಬೀಜ ವಿತರಣೆ ನಡೆದಿದೆ. ಬೀಜ ಖರೀದಿಸಿದವರು ಕಡ್ಡಾಯವಾಗಿ ರಸೀದಿ ಪಡೆಯಬೇಕು. ಕಾಳಸಂತೆಯಲ್ಲಿ ಬಿತ್ತನೆ ಬೀಜ ಖರೀದಿ ಮಾಡಬಾರದು. ಯಾವುದೇ ಬೆಳೆಯಲ್ಲಿ ವ್ಯತ್ಯಾಸ ಹಾಗೂ ರೋಗರುಜಿನಗಳು ಕಾಣಿಸಿದಲ್ಲಿ ಕೃಷಿ ಅಧಿಕಾರಿಗಳಿಂದ ರೈತರು ಸಲಹೆ ಪಡೆದುಕೊಳ್ಳಬಹುದು. ಗಣೇಶ ಕಮ್ಮಾರ, ಸಹಾಯಕ ಕೃಷಿ ನಿರ್ದೇಶಕ, ಬ್ಯಾಡಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net