ಕೇಂದ್ರ ಸಚಿವರ ಕಚೇರಿಗೆ ರೈತರ ಮುತ್ತಿಗೆ

h4-Protest 2
Published on

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತರು, ನಗರದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಬರಗಾಲ ಸೃಷ್ಟಿಯಾಗಿದ್ದರೂ ಕಾವೇರಿಕೊಳ್ಳದ ಜಲಾಶಯಗಳ ನೀರು ಖಾಲಿಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಹದಾಯಿ ನದಿ ನೀರಿನ ವಿವಾದ ಕುರಿತು ಈವರೆಗೂ ಯಾವುದೇ ಗಂಭೀರವಾಗಿ ಚಿಂತನೆ ನಡೆಯುತ್ತಿಲ್ಲ. ಈ ಬಗ್ಗೆ ರಾಜ್ಯದ ಧ್ವನಿಯಾಗಬೇಕಿದ್ದ ಕೇಂದ್ರ ಸಚಿವರು ಸುಮ್ಮನಿರುವುದು ಖಂಡನೀಯ ಎಂದು ಘೊಷಣೆ ಕೂಗಿದರು.

ಈಗಾಗಲೇ ಕಬಿನಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರನ್ನು ಬಲಿಕೊಡಲಾಗಿದೆ. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಬೇಕು. ಮಹದಾಯಿ ನದಿ ನೀರಿನ ವಿವಾದ ಕೂಡಲೇ ಬಗೆಹರಿಸಿ ಯೋಜನೆ ಪೂರ್ಣಗೊಳಿಸಿ ಅಚ್ಚುಕಟ್ಟು ಭಾಗದ ನೀರಿನ ಸಮಸ್ಯೆ ಬಗೆಹರಿಸಬೇಕು. ಕಬ್ಬು ಬೆಳೆಗಾರರಿಗೆ ಬರಬೇಕಾದ ಹಿಂದಿನ ವರ್ಷದ ಹೆಚ್ಚುವರಿ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಬಜೆಟ್ಟಿನಲ್ಲಿ ಕೃಷಿಗೆ ಅನುದಾನ ಕಡಿತ ಮಾಡಿರುವುದನ್ನು ವಿರೋಧಿಸಬೇಕು. ಕೇಂದ್ರ ಸರ್ಕಾರದ ಅಕ್ಕಿ, ಸಕ್ಕರೆ, ಈರುಳ್ಳಿ ರಪ್ತು ನಿಷೇಧ ಖಂಡನೀಯ. ಬಗರಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು. ಬ್ಯಾಂಕ್​ಗಳು ಕೃಷಿ ಸಾಲ ನೀಡುವಾಗ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು. ರೈತರ ಸಮಸ್ಯೆ ಪರಿಹರಿಸಲು ಕಾಳಜಿ ವಹಿಸಬೇಕು. ಒಂದು ವೇಳೆ ವಿಳಂಬ ತೋರಿದಲ್ಲಿ ಮುಂದಿನ ದಿನಗಳಲ್ಲಿ ಪ್ರಜಾ ಆಂದೋಲನ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನಿಜಗುಣಿ ಕೆಲಗೇರಿ, ಉಪಾಧ್ಯಕ್ಷ ಉಳವಪ್ಪ ಬಳಿಗಾರ, ರೈತ ಮುಖಂಡರಾದ ಪರಶುರಾಮ ಎತ್ತಿನಗುಡ್ಡ, ವಾಸು ಡಾಕಪ್ಪನವರ, ಬಸನಗೌಡ ಸಿದ್ದನಗೌಡ್ರ, ಚನ್ನಪ್ಪ ಜಗದಪ್ಪನವರ ಸೇರಿದಂತೆ ಹಲವು ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net