

ಮೂಡಿಗೆರೆ: ರೈತರು ಹೈನುಗಾರಿಕೆಯಲ್ಲಿ ತೊಡಗುವುದರಿಂದ ಹೆಚ್ಚು ಲಾಭ ಪಡೆಯಲು ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಎಂ.ಶಿವಪ್ರಸಾದ್ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಹೈನುಗಾರಿಕೆ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿ, ಕೃಷಿಯಲ್ಲಿ ಉಪಕಸುಬುಗಳು ಹೆಚ್ಚುವರಿ ಆದಾಯಕ್ಕೆ ದಾರಿ ಮಾಡಿಕೊಡುತ್ತವೆ ಎಂದರು.
ಹೈನುಗಾರಿಕೆ ಕೃಷಿಯೊಂದಿಗೆ ಪೂರಕ ಸಂಬಂಧ ಹೊಂದಿರುವುದರಿಂದ ರೈತರು ಅಗತ್ಯಕ್ಕನುಗುಣವಾಗಿ ಹೈನುಗಾರಿಕೆಯಲ್ಲಿ ತೊಡಗುವುದರಿಂದ ಕೃಷಿಗೆ ಸಾವಯವ ಗೊಬ್ಬರ, ಜಾನುವಾರುಗಳಿಗೆ ಮೇವು ಲಭ್ಯವಾಗುತ್ತದೆ. ಮಲೆನಾಡಿನಲ್ಲಿ ಸಾವಯವ ಗೊಬ್ಬರ ಉತ್ತಮ ಇಳುವರಿ ತಂದುಕೊಟ್ಟು ರೈತರ ಪಾಲಿಗೆ ವರದಾನವಾಗಲಿದೆ ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆ ವೈದ್ಯಾಧಿಕಾರಿ ಡಾ. ಅಶೋಕ್ ಮಾತನಾಡಿ, ಹೈನುಗಾರಿಕೆಯಲ್ಲಿ ಜಾನುವಾರುಗಳಿಗೆ ರೋಗ ಆವರಿಸಿಕೊಳ್ಳದಂತೆ ರೈತರು ಎಚ್ಚರಿಕೆ ವಹಿಸಬೇಕು. ಕೆಲ ಸಾಂಕ್ರಾಮಿಕ ರೋಗಗಳು ಜಾನುವಾರುಗಳಲ್ಲಿ ಕಂಡುಬಂದರೆ ಎಲ್ಲ ಜಾನುವಾರುಗಳೂ ಬಲಿಯಾಗಬೇಕಾದ ಅಪಾಯವಿರುವುದರಿಂದ ಪ್ರತಿ ದಿನ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಬೇಕು. ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ಎಂ.ವೈ.ಉಲ್ಲಾಸ್ ಮಾತನಾಡಿ, ಜಾನುವಾರುಗಳಿಗೆ ಬೇಕಾದ ಪರಿಪೂರ್ಣ ಮೇವು ನೀಡುವ ಮೂಲಕ ಆರೋಗ್ಯವಂತವಾಗಿ ಬೆಳೆಸಬೇಕು ಎಂದು ತಿಳಿಸಿದರು.
ಜಾನುವಾರುಗಳ ಮೇವು ಉತ್ಪಾದನೆ ಮಾಹಿತಿ ನೀಡಿದರು. ತರಬೇತಿಗಾಗಿ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಯ ರೈತರು ಪಾಲ್ಗೊಂಡಿದ್ದರು. ಅವರಿಗೆ ಪ್ರಮಾಣ ಪತ್ರ ನೀಡಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ, ಕೆವಿಕೆ ಮಣ್ಣು ಪ್ರಯೋಗ ವಿಜ್ಞಾನಿ ಡಾ. ಜಿ.ಎಂ.ಪ್ರಶಾಂತ್, ಡಾ. ಸುಚಿತ್ರಾಕುಮಾರಿ, ಡಾ. ಸುರೇಶ್‌ಕುಮಾರ್, ಡಾ. ಸ್ನೇಹಾ ಸೀಗೆಹಳ್ಳಿ ಇತರರಿದ್ದರು.