

ಹನೂರು; ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದುವುದರ ಜತೆಗೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸೋಮವಾರ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪಂಪ್‌ಸೆಟ್ ಪರಿಕರವನ್ನು ವಿತರಿಸಿ ಮಾತನಾಡಿದರು.
ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ, ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ಸವಲತ್ತುಗಳು ಹೆಚ್ಚಿನ ರೀತಿಯಲ್ಲಿ ದೊರಕಬೇಕಿದೆ. ಹೀಗಾದಾಗ ಮಾತ್ರ ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ರೈತರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡುವ ಸಂಬಂಧ ಹೆಚ್ಚಿನ ಒತ್ತು ನೀಡಲಾಗಿದೆ. ಜತೆಗೆ ಸಮರ್ಪಕ ನೀರಾವರಿ ಸೌಕರ್ಯವನ್ನು ಒದಗಿಸುವ ಸಂಬಂಧ ಈಗಾಗಲೇ ಯೋಜನೆಯೊಂದನ್ನು ರೂಪಿಸಲಾಗಿದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಈ ಯೋಜನೆಯಿಂದಾಗಿ ರೈತರಿಗೆ ಶಾಶ್ವತ ನೀರಾವರಿ ಸೌಕರ್ಯ ದೊರಕಲಿದೆ. ಆದ್ದರಿಂದ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಾಜು, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪಪಂ ಸದಸ್ಯ ಮಹೇಶ್‌ನಾಯ್ಕ, ಮುಖಂಡರಾದ ವಿಜಯಕುಮಾರ್, ಲಿಂಗೇಗೌಡ, ಮಾದೇವ ಹಾಗೂ ಇನ್ನಿತರರು ಇದ್ದರು.