

ಮಂಡ್ಯ: ರೈತರಿಗೆ ಅನುಕೂಲ ಹಾಗೂ ಆರ್ಥಿಕಾಭಿವೃದ್ಧಿಗೆ ಪೂರಕವಾಗುವಂತಹ ಯೋಜನೆ ಜಾರಿಗೊಳಿಸಲು ರಾಜ್ಯಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘ, ಸಂಪೂರ್ಣ ಸಾವಯವ ಕೃಷಿಕರ ಸಂಘ ಮಳವಳ್ಳಿ ಹಾಗೂ ಆರಿಗ್ರಾಫ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕೃಷಿಕರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ರೈತರ ಬವಣೆಗಳನ್ನು ತಗ್ಗಿಸಲು ಅನೇಕ ರೀತಿಯಲ್ಲಿ ಪ್ರಯತ್ನ ಪಡುತ್ತಿದೆ. ಜಾಗತಿಕವಾಗಿ ಪ್ರಚಲಿತವಾಗಿರುವ ಕಾರ್ಬನ್ ಕ್ರೆಡಿಟ್ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಎಲ್ಲ ರೈತರಿಗೂ ಪ್ರಯೋಜನ ದೊರೆತಂತಾಗುತ್ತದೆ. ಈ ಯೋಜನೆಯನ್ನು ಮಂಡ್ಯ ಜಿಲ್ಲೆಯಲ್ಲಿ ಪ್ರಥಮವಾಗಿ ಉದ್ಘಾಟನೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ರಾಜ್ಯಾದ್ಯಂತ ಯೋಜನೆಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ನೊಂದು ಬೆಂದ ರೈತರಿಗೆ ಈ ಯೋಜನೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿಕರ ಜಾಗೃತಿ ಸಮಾವೇಶದಲ್ಲಿ ಕೃಷಿ ಬಗ್ಗೆ ಅನೇಕ ಮಾಹಿತಿಯನ್ನು ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸಿರಿಧಾನ್ಯಗಳನ್ನು ಆಹಾರದಲ್ಲಿ ಉಪಯೋಗಿಸುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ಸಾವಯವ ಕೃಷಿ ಪದ್ಧತಿಯನ್ನು ಕಾರ್ಯಕ್ರಮದಲ್ಲಿ ತಿಳಿಸಲಾಗುತ್ತದೆ. ಬೆಳೆದಂತಹ ಸಿರಿಧಾನ್ಯವನ್ನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಸಿರಿಧಾನ್ಯವನ್ನು ಹೆಚ್ಚಿನ ಖರ್ಚಿಲ್ಲದೆ ಬೆಳೆಯಬಹುದಾಗಿದೆ. ಕೃಷಿಯಲ್ಲಿ ಬೆಳೆದ ಇನ್ನಿತರೆ ಬೆಳೆಗಳಿಗೆ ಬೆಲೆಯಲ್ಲಿ ಏರುಪೇರು ಸಾಮಾನ್ಯವಾಗಿದ್ದು, ಸಿರಿಧಾನ್ಯ ಬೆಳೆಗಾರರಿಗೆ ಅದರ ಸಮಸ್ಯೆ ಇರುವುದಿಲ್ಲ. ಸಿರಿಧಾನ್ಯವನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು ಆದ್ದರಿಂದ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಿ ಎಂದು ತಿಳಿಸಿದರು.
ಪರಿಸರದಲ್ಲಿನ ಹಸಿರು ಮನೆ ಅನಿಲಗಳ ಹೊರಸೂಸುವಿಕೆ ಹಾಗೂ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹವಾಮಾನದ ಬದಲಾವಣೆಗೆ ಕಾರಣವಾಗುತ್ತಿದೆ. ಇದರ ಸಲುವಾಗಿ ನೈಸರ್ಗಿಕ ಅಸಮತೋಲನಕ್ಕೆ ಉಂಟಾಗುತ್ತಿದ್ದು ಕೃಷಿ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ, ರೈತರಿಗೆ ಇದು ಕಳವಳಕಾರಿ ವಿಷಯವಾಗಿದೆ. ಕಾರ್ಬನ್ ಕ್ರೆಡಿಟ್ ಯೋಜನೆಯು ಪರಿಸರದಲ್ಲಿನ ಮಾಲಿನ್ಯವನ್ನು ಸರಿದೂಗಿಸಲು ಇಂಗಾಲದ ಹೊರಸೂಸುವಿಕೆಯನ್ನು ತಡೆದು, ಪರಿಸರದಲ್ಲಿ ಇಂಗಾಲದ ಡೈಯಾಕ್ಸೈಡ್ ಅನ್ನು ಹಿಡಿದಿಡುವ ಪ್ರಮುಖ ತಂತ್ರವಾಗಿದೆ. ಈ ಮೂಲಕ ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷರೂ ಆದ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರ್‌ನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ವನಕೃಷಿ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ಆರಿಗ್ರಾಫ್ ಸಂಸ್ಥೆ ಮುಖ್ಯಸ್ಥ ಸುಬ್ಬುಜೋಯಿಸ್, ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಮಹೇಶ್‌ಕುಮಾರ್, ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಇತರರಿದ್ದರು.