ಅಡಕೆಗೆ ಮಾರು ಹೋದ ರೈತರು

farmers attracted for areca farming
Published on

ಬ್ಯಾಡಗಿ: ಕೂಲಿಕಾರರ ಸಮಸ್ಯೆ, ಇತರ ಬೆಳೆ ನಷ್ಟದಿಂದ ರೈತರು ಅಡಕೆಯತ್ತ ಮುಖ ಮಾಡಿದ್ದು, ತಾಲೂಕಿನಲ್ಲಿ ಮುರ್ನಾಲ್ಕು ವರ್ಷದಿಂದ ಅಡಕೆ ಪ್ರದೇಶ ಹೆಚ್ಚುತ್ತಿದೆ.

10 ವರ್ಷಗಳ ಹಿಂದೆ ತಾಲೂಕಿನಲ್ಲಿ ಕೇವಲ ನೂರಾರು ಎಕರೆಯಲ್ಲಿ ಅಡಕೆ ಬೆಳೆಯಿತ್ತು. ಎಕರೆ ಅಡಕೆ ಸಸಿ ನೆಡಲು 50ರಿಂದ 70 ಸಾವಿರ ರೂ. ಖರ್ಚು ಮಾಡಬೇಕಿತ್ತು. ಆರ್ಥಿಕ ಸ್ಥಿತಿ ಉತ್ತಮವಾಗಿರುವ ರೈತರು ಮಾತ್ರ ಅಡಕೆ ತೋಟ ಮಾಡುತ್ತಿದ್ದರು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ವ್ಯಾಪ್ತಿಗೆ ಬ್ಯಾಡಗಿ ತಾಲೂಕು 2020ರಲ್ಲಿ ಸೇರ್ಪಡೆಗೊಂಡಿತು. ಉದ್ಯೋಗ ಖಾತ್ರಿ ಯೋಜನೆಯಡಿ ಅಡಕೆ ಬೆಳೆ ಪ್ರದೇಶ ವಿಸ್ತರಣೆಗೆ ಅವಕಾಶ ನೀಡಿದ ಬಳಿಕ ವರ್ಷದಿಂದ ವರ್ಷಕ್ಕೆ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಭೂಮಿ ಅಡಕೆ ತೋಟವಾಗಿ ಪರಿವರ್ತನೆಗೊಂಡಿದೆ.

ಕೂಲಿಕಾರರ ಸಮಸ್ಯೆಗೆ ಪರಿಹಾರ: ಮೂರು ವರ್ಷದಿಂದ ನಿರಂತರ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೂಲಿ ಕಾರ್ವಿುಕರ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಅಡಕೆ ವರದಾನವಾಗಿದೆ. ಭತ್ತ, ಗೋವಿನಜೋಳ ಸೇರಿದಂತೆ ಮಳೆಗಾಲದ ಬೆಳೆಗೆ ಸೀಮಿತವಾಗಿದ್ದ ರೈತರು ನಷ್ಟದಿಂದ ಸುಸ್ತಾಗಿದ್ದರು. ಕೂಲಿಕಾರರ ಸಮಸ್ಯೆಯಂತೂ ವಿಪರೀತವಾಗಿತ್ತು. ಒಂದು ಬಾರಿ ಅಡಕೆ ಸಸಿ ನೆಟ್ಟು ಬೆಳೆಸಿದಲ್ಲಿ ಅಡಕೆ ಗೊನೆಯನ್ನು ಖರೀದಿದಾರರೇ ಕತ್ತರಿಸಿಕೊಂಡು ಹೋಗುವುದಲ್ಲದೆ ನೇರವಾಗಿ ಹಣ ಪಾವತಿಸುತ್ತಿದ್ದಾರೆ. ಇದರಿಂದ ಕೂಲಿಕಾರರನ್ನು ಹುಡುಕಿ ತರುವ ಸವಾಲು ತಪ್ಪಿದೆ. ಸಿಪ್ಪೆ ಸಹಿತ ಹಸಿ ಅಡಕೆ ಕೆಜಿಗೆ 50ರಿಂದ 60 ರೂ. ದರದಲ್ಲಿ ಮಾರಾಟವಾಗುತ್ತಿದೆ. ಎಕರೆಗೆ 60ರಿಂದ 80 ಕ್ವಿಂಟಾಲ್​ನಷ್ಟು ಫಸಲು ಬರುತ್ತದೆ. ಇದರಿಂದ 3-4 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ರಡು ಎಕರೆಯಲ್ಲಿ ಅಡಕೆ ತೋಟ ಮಾಡಿದ್ದು, ಫಸಲು ಬರುತ್ತಿದೆ. ಮೊದಲ ವರ್ಷ 1 ಲಕ್ಷ ರೂ. ಆದಾಯ ಸಿಕ್ಕಿತ್ತು. ನಂತರ ಎಕರೆಗೆ 3 ಲಕ್ಷ ರೂ.ನಂತೆ ಬಂದಿದೆ. ಅಡಕೆ ಮಧ್ಯೆ ಬೆಳೆದ ಅರಿಷಿನ, ಶುಂಠಿ ಬೆಳೆಯಿಂದಲೂ ಲಾಭ ಬರುತ್ತಿದೆ. ಕೂಲಿಕಾರ ಕೊರತೆ, ರೋಗದ ಸಮಸ್ಯೆ, ನೀರಿನ ಸಮಸ್ಯೆ ಇತ್ಯಾದಿ ಎದುರಾಗಿಲ್ಲ. ಹೀಗಾಗಿ ಸಾಲ ಶೂಲದಿಂದ ಮುಕ್ತವಾಗಿದ್ದೇವೆ. ಸರ್ಕಾರದ ಯೋಜನೆ ಅನುಕೂಲವಾಗಿವೆ. </p><p>| ಶೇಖಯ್ಯ ಹಮ್ಮಗಿ, ಘಾಳಪೂಜಿ ರೈತ

ರೈತರು ಅಡಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಯತ್ತ ಮುಖಮಾಡಿದ್ದಾರೆ. ಕಡಿಮೆ ಖರ್ಚು, ಅಧಿಕ ಲಾಭದ ಹಿನ್ನೆಲೆಯಲ್ಲಿ ಅಡಕೆ ಪ್ರದೇಶ ವಿಸ್ತಾರವಾಗಿದೆ. ಇಲಾಖೆಯಿಂದ ಸಹಾಯಧನ, ಬೆಳೆ ವಿಮೆ, ಮಿಶ್ರಬೆಳೆಗೆ ಪ್ರೋತ್ಸಾಹಧನ ಸೇರಿದಂತೆ ಹಲವು ಸೌಲಭ್ಯಗಳಿವೆ. ಇಲಾಖೆ ಎಲ್ಲ ನೆರವು, ಸಲಹೆ, ಮಾರ್ಗದರ್ಶನ ನೀಡುತ್ತಿದೆ. | ಅಶೋಕ ಕುರುಬರ, ಸಹಾಯಕ ತೋಟಗಾರಿಕೆ ನಿರ್ದೇಶಕ ಬ್ಯಾಡಗಿ

ಅಡಕೆ ಬೆಳೆ ಪ್ರದೇಶ ವಿಸ್ತರಣೆ ವಿವರ:

ವರ್ಷ                     ಹೆಕ್ಟೇರ್

2019-20                80

2020-21                290

2021-22                290

2022-23               290

2023-24               290

ಒಟ್ಟು                     1240

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net