

ಮೈಸೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಹೋರಾಟನಿರತ ರೈತರ ಮೇಲಿನ ಗೂಂಡಾಗಿರಿ ಖಂಡಿಸಿ ರೈಲು ಸಂಚಾರ ತಡೆಗೆ ಮುಂದಾದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಹಾಗೂ ರೈತರನ್ನು ಪೊಲೀಸರು ಶುಕ್ರವಾರ ಬಂಧಿಸಿದರು.
ಕೇಂದ್ರ ಸರ್ಕಾರಕ್ಕೆ ಪ್ರತಿಭಟನೆ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಸಂಘಟನೆಯ ರೈತರು ರೈಲು ಸಂಚಾರ ತಡೆಯಲು ನಗರದ ರೈಲು ನಿಲ್ದಾಣಕ್ಕೆ ತೆರಳಿದರು. ಈ ವೇಳೆ ದ್ವಾರದಲ್ಲೇ ಇದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಇದರಿಂದ ರೈತರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಲು ಯತ್ನಿಸಿದಾಗ ದ್ವಾರದ ಬಳಿ ಕುಳಿತ ರೈತರು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದರು.
ನಾವು ರೈಲು ಸಂಚಾರ ತಡೆ ನಡೆಸಲು ಬಂದಿದ್ದೇವೆ. ನಾವು ಗೂಂಡಾಗಳು, ದೇಶ ದ್ರೋಹಿಗಳಲ್ಲ. ನಾವು ಲೂಟಿ ಮಾಡಲು ಬಂದಿಲ್ಲ. ನಮ್ಮನ್ನು ಏಕೆ ತಡೆದಿದ್ದೀರಿ? ರೈಲು ನಿಲ್ದಾಣಕ್ಕೆ ಹೋಗಲು ನಮಗೆ ಹಕ್ಕಿಲ್ಲವೇ ಎಂದು ರೈಲ್ವೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದರು.
ಕೇಂದ್ರ ಸರ್ಕಾರಕ್ಕೆ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಲು ಹೆಚ್ಚಿನ ಕಾಳಜಿ ಇರುತ್ತದೆ. ಆದರೆ ರೈತರ ಸಾಲ ಮನ್ನಾ ವಿಚಾರ, ಎಂ.ಎಸ್.ಸ್ವಾಮಿನಾಥನ್ ವರದಿ, ಬೆಂಬಲ ಬೆಲೆ, ಡಬ್ಲುೃಟಿಒ ಒಪ್ಪಂದ, ರೈತರಿಗೆ ಪಿಂಚಣಿ ನೀಡುವ ಯೋಜನೆ, ಬೆಳೆ ವಿಮೆ ಪದ್ಧತಿ, ಕಳೆದ ವರ್ಷ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಗಳಲ್ಲಿ ನೆರವು ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡದಿದ್ದರೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಮರಣ ಶಾಸನವನ್ನು ರೈತರು ಬರೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರೈತರು ನ್ಯಾಯ ಕೇಳಿದರೆ ಗೋಲಿಬಾರ್ ಮಾಡುತ್ತಾರೆ. ಇದು ದೇಶದ ರೈತರಿಗೆ ಮಾಡುವ ಅಪಮಾನ. ರೈತರು ಗುಲಾಮರು, ಭಿಕ್ಷುಕರಲ್ಲ. ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಯಾರೂ ದೇಶ ದ್ರೋಹಿಗಳಲ್ಲ. ನಾವು ದೆಹಲಿಗೆ ಹೋಗುವಾಗ ಮಾರ್ಗ ಮಧ್ಯದಲ್ಲೇ ತಡೆದು ವಾಪಸ್ ಕಳುಹಿಸುತ್ತಾರೆ. ದೆಹಲಿಯಲ್ಲಿ ಹೋರಾಟ ಮಾಡುವ ಪಂಜಾಬ್, ಹರಿಯಾಣ ರೈತರನ್ನು ದೇಶ ವಿರೋಧಿಗಳು ಎನ್ನುತ್ತಾರೆ. ಇದರ ಅರ್ಥ ಏನು? ರೈತರ ಸಮಸ್ಯೆ ಬಗೆಹರಿಯುವವರೆಗೂ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪಟ್ಟು ಬಿಡದೆ ರೈಲ್ವೆ ನಿಲ್ದಾಣದ ಒಳಗೆ ಹೋಗಲು ಪ್ರಯತ್ನಿಸಿದಾಗ ಪೊಲೀಸರು ರೈತರನ್ನು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದು ಸಂಜೆ ವೇಳೆಗೆ ಬಿಡುಗಡೆಗೊಳಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಮುಖಂಡರಾದ ಕಿರಗಸೂರು ಶಂಕರ್, ಹೆಗ್ಗೂರು ರಂಗರಾಜು, ಬನ್ನೂರು ಸೂರಿ, ಬಿಪಿ ಪರಶಿವಮೂರ್ತಿ, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಕುರುಬೂರು ಪ್ರದೀಪ್, ಕಿರಗಸೂರು ಪ್ರಸಾದ್ ನಾಯಕ್, ಉಮೇಶ್, ಕಾಟೂರು ಮಹಾದೇವಸ್ವಾಮಿ, ನಾಗೇಶ್, ಶ್ರೀಕಂಠ, ನಂಜುಂಡಸ್ವಾಮಿ, ವರಕೋಡು ನಾಗೇಶ್, ಪಿ ರಾಜು, ಅಂಬಳೆ ಮಂಜುನಾಥ್, ಕೋಟೆ ಸುನಿಲ್, ಕೊಡನಹಳ್ಳಿ ಪ್ರಕಾಶ್, ಸೋಮಶೇಖರ್, ಚೇತನ್, ಶಂಭು, ಶಾಂತರಾಜ್, ಶಿವಮೂರ್ತಿ, ಮಂಜುನಾಥ್, ಶಿವಕುಮಾರ್ ಇತರರು ಇದ್ದರು.