

ಮೈಸೂರು: ರಾಜ್ಯದ ಎಲ್ಲ ಅಣೆಕಟ್ಟುಗಳು ತುಂಬುವ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕೃಷಿ ಚಟುವಟಿಕೆಗೆ ಎರಡು ದಿನಗಳ ಒಳಗೆ ನಾಲೆಗಳಿಗೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಮುಂದಿನ ತಿಂಗಳಲ್ಲಿ ರೈತರು ಭತ್ತ ನಾಟಿ ಮಾಡಬೇಕು, ಇಲ್ಲವಾದರೆ ಭತ್ತ ಫಸಲು ಬರುವುದಿಲ್ಲ. ಹೀಗಾಗಿ ಭತ್ತ ನಾಟಿಗೆ ನೀರು ನೀಡಲು ಸಿದ್ಧತೆ ಮಾಡಿಕೊಳ್ಳಬೇಕು. ರೈತರ ಅಭಿಪ್ರಾಯ ಪಡೆದು ರಾಜ್ಯ ಸರ್ಕಾರ ಪ್ರತಿ ಬಾರಿ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನಾಳೆಯೊಳಗೆ ಕೆಆರ್‌ಎಸ್ 110 ಅಡಿ ತುಂಬುವ ಸಾಧ್ಯತೆ ಇದೆ. ಈಗ ನಾವು ಭತ್ತ ಹಾಕುವ ಸಮಯ. ಆಗಸ್ಟ್ ಒಳಗೆ ನಾಟಿ ಮಾಡಬೇಕು. ಸ್ವಲ್ಪ ತಡವಾದರೂ ಬೆಳೆ ನಷ್ಟ ಆಗತ್ತದೆ. ಹಾಗಾಗಿ ಭತ್ತ ಬೆಳೆಯಲು ನೀರು ನೀಡಬೇಕು. ಇದರ ಜತೆಗೆ ಕೆರೆಕಟ್ಟೆಗಳನ್ನು ತುಂಬಬೇಕು ಎಂದು ಆಗ್ರಹಿಸಿದರು.
ಕೊಬ್ಬರಿ ಧಾರಣೆ 1 ಕ್ವಿಂಟಾಲ್‌ಗೆ 8 ಸಾವಿರ ರೂ.ಗೆ ಕುಸಿತ ಕಂಡಿದೆ. ಕೇಂದ್ರ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆಯಾಗಿ 20 ಸಾವಿರ ರೂ., ರಾಜ್ಯ ಸರ್ಕಾರ 5 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿ ಆ.12 ರಂದು ಸಂಸದರ ಮನೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದರು.
ಮಂಡ್ಯ ರೈತ ಸಂಘದ ಮುಖಂಡ ಎ.ಎಲ್.ಕೆಂಪೂಗೌಡ ವಾತನಾಡಿ, ಈ ಹಿಂದೆ ಸಕ್ಕರೆ ಇಳುವರಿ 8.9ಕ್ಕೆ ನಿಗದಿಯಾಗಿತ್ತು. ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಸಕ್ಕರೆ ಇಳುವರಿಯನ್ನು 10.2ಕ್ಕೆ ನಿಗದಿ ಮಾಡಿದೆ. ಆದರೆ, ರಾಜ್ಯದಲ್ಲಿ ಇದುವರೆಗೆ 9.5ಕ್ಕಿಂತ ಹೆಚ್ಚು ಇಳುವರಿ ದಾಖಲಾದ ಉದಾಹರಣೆ ಇಲ್ಲ. 10.2 ಇಳುವರಿ ಬಾರದೆ ಇದ್ದರೆ ಕಾರ್ಖಾನೆಯವರು 305 ರೂ. ಕಳೆಯುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡುತಿತ್ತು. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ 150 ರೂ., ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭ 400 ರೂ. ಪ್ರೋತ್ಸಾಹ ಧನ ನೀಡಲಾಗುತಿತ್ತು. ಅದರಂತೆ ಈ ಬಾರಿಯೂ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಹಕರು ಖರೀದಿಸುವ ಹಾಲಿನ ದವರನ್ನು ಆ.1 ರಿಂದ ಅನ್ವಯ ಆಗುವಂತೆ ಪ್ರತಿ ಲೀಟರ್‌ಗೆ 3 ರೂ.ಹೆಚ್ಚಳ ಮಾಡಿದೆ. ಆದರೆ, ಮತ್ತೊಂದೆಡೆ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 1.50 ರೂ. ಇಳಿಕೆ ಮಾಡಿರುವುದು ಸರಿಯಲ್ಲ. ರೈತರಿಗೆ ಈ ಹಿಂದೆ ನೀಡುತ್ತಿದ್ದ ದರದ ಜತೆಗೆ ಹೆಚ್ಚುವರಿ 2 ರೂ. ನೀಡಬೇಕೆಂದು ಒತ್ತಾಯಿಸಿ ಜು.31ರಂದು ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.