ಪರಶುರಾಮಪುರಕ್ಕೆ ಬೇಕು ತಾಲೂಕು ಪಟ್ಟ

dj clk prathibatane
Published on

ಚಳ್ಳಕೆರೆ: ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಬೇಕೆಂದು ಆಗ್ರಹಿಸಿ ನಗರದ ನೆಹರು ವೃತ್ತದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ಗುರುವಾರ ನಗರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನೆಹರು ವೃತ್ತದಲ್ಲಿ ಜಮಾಯಿಸಿದ ಜನರು ಪ್ರತಿಭಟನೆ ಬಳಿಕ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪರಶುರಾಂಪುರ ತಾಲೂಕು ಮಾಡುವಂತೆ ಮೂರು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ.

ಸರ್ಕಾರ ನೇಮಕ ಮಾಡಿದ್ದ ಎಂ.ಬಿ.ಪ್ರಕಾಶ್ ಸೇರಿ ಬಹುತೇಕ ಸಮಿತಿಗಳು ಪರಶುರಾಂಪುರ ತಾಲೂಕು ಘೋಷಣೆಗೆ ಭೌಗೋಳಿಕವಾಗಿ ಮತ್ತು ಜನಸಂಖ್ಯೆ ಆಧಾರಿತವಾಗಿ ಅರ್ಹತೆ ಇದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದರು.

ಪರಶುರಾಂಪುರ ವ್ಯಾಪ್ತಿಯಲ್ಲಿ ಕಾಲೇಜು, ವೃತ್ತಿಪರ ತರಬೇತಿ ಸಂಸ್ಥೆ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಸೇರಿ ನೂರಾರು ಬಸ್‌ಗಳ ಸಂಚಾರಿಸುವ ಕೇಂದ್ರವಾಗಿದೆ.

70 ಕಂದಾಯ ಗ್ರಾಮಗಳ ಜನರ ಸರ್ಕಾರಿ ಕೆಲಸಗಳ ಅನುಕೂಲಕ್ಕಾಗಿ ಪರಶುರಾಂಪುರ ತಾಲೂಕು ಘೋಷಣೆ ಆಗಬೇಕಿದೆ. ಅಲ್ಲಿಯವರೆಗೆ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, 2013ರ ಅವಧಿಯಿಂದ ಪರಶುರಾಂಪುರವನ್ನು ತಾಲೂಕಾಗಿ ಘೋಷಿಸಬೇಕು ಎಂದು ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆಸಲಾಗಿತ್ತು.

ಕೆಲ ರಾಜಕೀಯ ಒತ್ತಡಗಳಿಂದ ಹಿನ್ನಡೆಯಾಗಿದೆ. ಪ್ರಸ್ತುತ ಸರ್ಕಾರದಿಂದ ಪರಶುರಾಂಪುರವನ್ನು ತಾಲೂಕಾಗಿ ಘೋಷಿಸುವುಸು ನನ್ನ ಗುರಿ ಆಗಿದೆ ಎಂದು ತಿಳಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ, ಅಧ್ಯಕ್ಷ ಸಿದ್ದನಗೌಡ ಪಾಟೀಲ, ತಾಲೂಕಾಧ್ಯಕ್ಷ ಕೆ.ಚಿಕ್ಕಣ್ಣ,

ಪ್ರಧಾನ ಕಾರ್ಯದರ್ಶಿ ಎಚ್.ಪ್ರಕಾಶ್, ಕಾರ್ಯಾಧ್ಯಕ್ಷ ಹನುಮಂತರಾಯಪ್ಪ, ತಾಪಂ ಮಾಜಿ ಸದಸ್ಯ ಹನುಮಂತಪ್ಪ, ಹೊರಕೆರೆ ರಂಗಸ್ವಾಮಿ,

ಪಿ.ಚನ್ನಕೇಶವ, ತಿಮ್ಮಣ್ಣ, ಜಯವೀರಚಾರಿ, ಶಾಂತಣ್ಣ, ಮಂಜುನಾಥ, ರಾಮಚಂದ್ರಪ್ಪ, ಗಂಗಾಧರ ಇತರರಿದ್ದರು.

ಪರಶುರಾಮಪುರ ತಾಲೂಕು ಮಾಡಬೇಕೆಂಬುದು ನನ್ನ ಮನದಾಸೆ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ಈಗಾಗಲೇ 63 ತಾಲೂಕುಗಳ ಘೋಷಣೆಗೆ ಸಿದ್ಧವಾಗಿರುವ ಪಟ್ಟಿಯಲ್ಲಿ ಪರಶುರಾಂಪುರ ಸೇರ್ಪಡೆ ಮಾಡುವಂತೆ ಪ್ರಯತ್ನ ಮಾಡಲಾಗುವುದು.ಟಿ.ರಘುಮೂರ್ತಿ, ಶಾಸಕ ಪರಶುರಾಮಪುರಕ್ಕಿಂತ ಚಿಕ್ಕ ಮತ್ತು ಅಷ್ಟಾಗಿ ಸೌಲಭ್ಯಗಳು ಇಲ್ಲದ ಹೋಬಳಿಗಳನ್ನು ತಾಲೂಕು ಕೇಂದ್ರವಾಗಿ ಘೋಷಿಸಲಾಗಿದೆ. ಇದು ತಾರತಮ್ಯ ನೀತಿ. ಈ ಬಾರಿ ಘೋಷಣೆ ಆಗುವವರೆಗೂ ನಾವು ನಿರಂತರ ಚಳವಳಿ ಹಮ್ಮಿಕೊಳ್ಳುತ್ತೇವೆ.ಸೋಮಗುದ್ದು ರಂಗಸ್ವಾಮಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net