

ಮದ್ದೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಸದಸ್ಯರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಶಂಕರೇಗೌಡ ಮಾತನಾಡಿ, 2022-23ನೇ ಸಾಲಿನಲ್ಲಿ ಕಬ್ಬು ಅರೆದಿರುವ ಹಂಗಾಮಿನಲ್ಲಿ ಅಂದಿನ ರಾಜ್ಯ ಸರ್ಕಾರ ಟನ್ ಕಬ್ಬಿಗೆ 150 ರೂ.ಗಳನ್ನು ಕಬ್ಬು ಬೆಳೆಗಳಿಗೆ ಪಾವತಿಸಲಾಗುವುದು ಎಂದು ಘೋಷಣೆ ಮಾಡಿತ್ತು. ಈ ಕೂಡಲೇ ರಾಜ್ಯ ಸರ್ಕಾರ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನೊಂದು ತಿಂಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬರುತ್ತಿದ್ದು, ಭತ್ತಕ್ಕೆ ಕ್ವಿಂಟಾಲ್‌ಗೆ ಕನಿಷ್ಠ 3500 ರೂ. ಬೆಲೆ ನಿಗದಿಗೊಳಿಸಬೇಕು ಹಾಗೂ ನವಂಬರ್ ತಿಂಗಳಲ್ಲೇ ಖರೀದಿ ಕೇಂದ್ರ ತೆರೆದು ರಾಗಿ, ಭತ್ತ ಖರೀದಿಸಬೇಕು ಮತ್ತು ಶಾಶ್ವತವಾಗಿ ಖರೀದಿ ಕೇಂದ್ರಗಳನ್ನು ವರ್ಷ ಪೂರ್ತಿ ತೆರೆದಿರಬೇಕು ಎಂದರು.
ಕೇಂದ್ರ ಸರ್ಕಾರ ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕೆಂದರು. ಕೇಂದ್ರ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿ ಮಾಡುವಾಗ 8.5 ಇಳುವರಿ ಮಾನದಂಡ ಅನುಸರಿಸಿ ಬೆಲೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್‌ಗಳಲ್ಲಿ ರೈತರು ಅಡಮಾನವಿಟ್ಟ ಚಿನ್ನಾಭರಣಗಳನ್ನು ನವೀಕರಿಸಲು ಅಸಲು ಮತ್ತು ಬಡ್ಡಿ ಪಾವತಿಸುವಂತೆ ರೂಪಿಸಿರುವ ನೀತಿಯನ್ನು ಕೈ ಬಿಟ್ಟು ಹಿಂದಿನಂತೆ ಬಡ್ಡಿ ಪಡೆದು ಸಾಲ ನವೀಕರಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ರಾಜ್ಯ ಸರ್ಕಾರ ಕೈಗೊಂಡಿರುವ ಬೆಂಗಳೂರು ಕುಡಿಯುವ ನೀರಿನ 6ನೇ ಹಂತದ ಯೋಜನೆ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ರಾಮಲಿಂಗಯ್ಯ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಶೀಘ್ರವೇ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಪ್ರತ್ಯೇಕವಾಗಿ ರೈತರ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ವಿ.ಸಿ.ಉಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಲ್.ವಿನೋದ್‌ಕುಮಾರ್, ಖಜಾಂಚಿ ಅಣ್ಣೂರು ಬೋರೇಗೌಡ, ಮುಖಂಡರಾದ ಲಿಂಗಪ್ಪಾಜಿ, ಜಿ.ಎ.ಶಂಕರ್, ಗೊಲ್ಲರದೊಡ್ಡಿ ಅಶೋಕ್, ಜಿ.ಎಚ್.ವೀರಪ್ಪ, ರವಿಕುಮಾರ್, ಜಿ.ಎ.ಶಂಕರ್, ದೇವರಾಜು, ರಾಜೇಶ್, ಮಹೇಶ, ವೆಂಕಟೇಶ್ ಇದ್ದರು.