ರೈತ ಸಂಘದಿಂದ ರಸ್ತೆ ಮಧ್ಯೆ ಟೆಂಟ್ ಹಾಕಿ ಪ್ರತಿಭಟನೆ

ರೈತ ಸಂಘದಿಂದ ರಸ್ತೆ ಮಧ್ಯೆ ಟೆಂಟ್ ಹಾಕಿ ಪ್ರತಿಭಟನೆ
Published on

ಹಾಸನ: ಬ್ಯಾಂಕ್‌ನವರು ರೈತರ ಕೃಷಿ ಸಾಲ ವಸೂಲಾತಿಗೆ ಜಮೀನನ್ನು ಹರಾಜು ಮಾಡುವುದನ್ನು ತಡೆಯಬೇಕು ಹಾಗೂ ಜಮೀನು ಉಳಿಸುವಂತೆ ಆಗ್ರಹಿಸಿ ರೈತ ಸಂಘದಿಂದ ನಗರದ ಕೆ.ಆರ್.ಪುರಂನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರಿನ ರಸ್ತೆ ಮಧ್ಯೆ ಟೆಂಟ್ ಹಾಕಿ, ಸ್ಥಳದಲ್ಲಿಯೇ ಮಧ್ಯಾಹ್ನದ ಊಟ ತಯಾರಿಸಿ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದ ವರಿಷ್ಠ ಕೆ.ಟಿ.ಗಂಗಾಧರ್ ಮಾತನಾಡಿ, ರೈತರು ಬೆಳೆ ಬೆಳೆಯಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ತೀರುವಳಿ ಮಾಡದೆ ಸುಸ್ತಿದಾರರಾಗಿರುವ ರೈತರ ಸಾಲವನ್ನು ಏಕಗಂಟು ಸಾಲ ತೀರುವಳಿ ಮೂಲಕ ತೀರುವಳಿ ಮಾಡಲಾಗುತ್ತಿದೆ. ಆದರೆ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನವರು ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ಏಕಗಂಟು ಮುಖಾಂತರ ತೀರುವಳಿ ಮಾಡಿಕೊಂಡು ರಿಯಾಯಿತಿ ಕೊಡಬೇಕು ಎಂದು ಆಗ್ರಹಿಸಿದರು.

ಬ್ಯಾಂಕ್‌ನವರು ಲಾಯರ್ ಮತ್ತು ಕೋರ್ಟ್ ಮೂಲಕ ರೈತರಿಗೆ ನೋಟಿಸ್ ನೀಡುತ್ತಿದ್ದು, ಇ-ಹರಾಜು ಹಾಕುತ್ತೇವೆ ಎಂದು ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇದು ಕೂಡಲೇ ರದ್ದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಾಲ ಪಡೆದ ರೈತರು, ಬೆಳೆ ನಷ್ಟ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದರೆ ಸಾಲ ಮನ್ನಾ ಆಗಬೇಕು. ಬ್ಯಾಂಕ್‌ನವರು ವಿನಾಕಾರಣ ತೊಂದರೆ ನೀಡಬಾರದು, ಅಲೆಸಬಾರದು ಎಂದರು.

ಪ್ರತಿ ಮೂರು ತಿಂಗಳಿಗೊಮ್ಮೆ ಬಳ್ಳಾರಿ ಮುಖ್ಯ ಕಚೇರಿಯವರು ರೈತರನ್ನು ಅಲೆಸದೆ ಅವರೇ ಇಲ್ಲಿಗೆ ಬಂದು ರೈತರ ಅಹವಾಲು ಕೇಳಿ ತಕ್ಷಣ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮುಖ್ಯ ಅಧಿಕಾರಿ ಬರುವುದನ್ನು ಬ್ಯಾಂಕ್‌ನ ಎಲ್ಲ ಶಾಖೆಯವರು ರೈತರಿಗೆ ಮಾಹಿತಿ ನೀಡಬೇಕು. ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ, ಹಾಲಿನ ಹಣ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಕಂತನ್ನು ಬ್ಯಾಂಕ್‌ನವರು ಜಮಾ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ವರಿಷ್ಠ ಕಣಗಾಲ್ ಮೂರ್ತಿ, ರಾಜ್ಯ ಅಧ್ಯಕ್ಷೀಯ ಮಂಡಳಿಯ ಸದಸ್ಯ ಗ್ಯಾರಂಟಿ ರಾಮಣ್ಣ, ಮರ್ಕಲಿ ಪ್ರಕಾಶ್, ಮಂಜು ಬಿಟ್ಟಗೌಡನಹಳ್ಳಿ, ಅರಕಲಗೂಡು ತಾಲೂಕಿನ ಭುವನೇಶ್, ಬೇಲೂರು ತಾಲೂಕಿನ ಭೋಗ ಮಲ್ಲೇಶ್, ಕುಮಾರಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net