ಮೈಕ್ರೋ ಫೈನಾನ್ಸ್ ಕಂಪನಿಗಳ ದೌರ್ಜನ್ಯ ತಡೆಗಟ್ಟಿ

25 jlr 2
Published on

ಜಗಳೂರು: ಮೈಕ್ರೋ ಫೈನಾನ್ಸ್ ಕಂಪನಿಯವರು ಸಾಲಗಾರರಿಗೆ ನೀಡುತ್ತಿರುವ ಹಿಂಸೆ ಹಾಗೂ ದೌರ್ಜನ್ಯ ತಡೆಗಟ್ಟಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್) ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮಹಾತ್ಮಗಾಂಧಿ ಹಳೇ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಮೂಲಕ ತಾಲೂಕು ಕಚೇರಿಗೆ ತೆರಳಿ ಉಪ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಮುಖಂಡ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ನೆರೆ ರಾಜ್ಯಗಳಲ್ಲಿ ಕಪ್ಪು ಹಣ ತಂದು ರಾಜ್ಯದ ಜನರಿಗೆ ಹಿಂಸೆ ನೀಡುತ್ತಿರುವ ಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದೆ. ಸಾಲದ ನೆಪದಲ್ಲಿ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಇವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು. ತಲೆ ಎತ್ತಿರುವ ಅಕ್ರಮ ಫೈನಾನ್ಸ್ ಕಂಪನಿಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲೂಕಾಧ್ಯಕ್ಷ ಚಿರಂಜೀವಿ ಸಿ.ಎಂ ಹೊಳೆ ಮಾತನಾಡಿ, ತಾಲೂಕಿನಲ್ಲಿ ಖಾಸಗಿ ಫೈನಾನ್ಸ್​ಗಳ ವಸೂಲಿಗಾರರು ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವುದರಿಂದ ಮನನೊಂದು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ರೈತರು ಖರೀದಿಸಿದ ಟ್ರ್ಯಾಕ್ಟರ್​ಗಳನ್ನು ಕಂತು ಕಟ್ಟದ ನೆಪ ಹೇಳಿಕೊಂಡು ಗೂಂಡಾಗಳನ್ನು ಬಿಟ್ಟು ಜಪ್ತು ಮಾಡುತ್ತಿದ್ದಾರೆ. ಅತಿವೃಷ್ಟಿಯಿಂದ ರೈತ ಕಾರ್ವಿುಕರು, ಮಹಿಳೆಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಉದ್ಯೋಗ ಅರಸಿ ಗುಳೆಹೋಗುತ್ತಿದ್ದಾರೆ. ಕಾಲಾವಕಾಶ ನೀಡಬೇಕು ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ಪದಾಧಿಕಾರಿಗಳಾದ ಅಂಜಿನಪ್ಪ, ಅನಿಲ್​ಕುಮಾರ್, ಹುಸೇನ್ ಪೀರ, ಬಸವರಾಜ್, ಮಲ್ಲೇಶ್, ಚಿಕ್ರೇಶ್, ಅನಿಲ್, ಶರಣಪ್ಪ, ರಂಗಪ್ಪ, ಮಲ್ಲೇಶ್, ವೀರೇಶ್, ಪರುಶರಾಮಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net