ಬೀಜ, ರಸಗೊಬ್ಬರ ಅಧಿಕ ಬೆಲೆಗೆ ಮಾರಾಟಕ್ಕೆ ಖಂಡನೆ

JLR ph 2 May 21 Protest
Published on

ಜಗಳೂರು: ಬಿತ್ತನೆ ಬೀಜ ಹಾಗೂ ರಸಗೊಬ್ಬರ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಬುಧವಾರ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ತಾಲೂಕು ರೈತ ಸಂಘ ಕೃಷಿ ಇಲಾಖೆ ಎದುರು ಪ್ರತಿಭಟನೆ ನಡೆಸಿತು.

ಇಲ್ಲಿನ ಕೃಷಿ ಇಲಾಖೆಗೆ ಧಾವಿಸಿದ ರೈತರು ಕೃಷಿಪರಿಕರ ಮಾರಾಟಗಾರರ ಹಾಗೂ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿ ಸಹಾಯಕ ಕೃಷಿ ನಿರ್ದೇಶಕಿ ಶ್ವೇತಾ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ಪೂರ್ವ ಮುಂಗಾರಿನಿಂದ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಜೂನ್ ಮೊದಲ ವಾರದಿಂದ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಮೆಕ್ಕೆಜೋಳ ಮತ್ತು ರಸ ಗೊಬ್ಬರಗಳ ಬೆಲೆ ದುಬಾರಿಯಾಗಿದ್ದು, ರೈತರ ಮೇಲೆ ಹೆಚ್ಚು ಆರ್ಥಿಕ ಹೊರೆ ಬಿದ್ದಿದೆ ಎಂದು ರೈತ ಮುಖಂಡರು ಆಪಾದಿಸಿದರು.

ತಾಲೂಕಾಧ್ಯಕ್ಷ ಚಿರಂಜೀವಿ ಸಿ.ಎಂ ಹೊಳೆ ಮಾತನಾಡಿ, ಮಳೆಯನ್ನೇ ನಂಬಿಕೊಂಡು ಬದುಕುವ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ವರ್ಷದಿಂದ ವರ್ಷಕ್ಕೆ ಕೃಷಿ ಪರಿಕರಗಳ ಬೆಲೆ ಏರಿಕೆಯಾಗುತ್ತದೆ. ಆದರೆ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳಬೇಕಾಗಿದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಅಧಿಕ ಬೆಲೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಲೆ ಏರಿಕೆಯನ್ನು ಇಳಿಸಬೇಕು ಎಂದರು.

ಸಂಘದ ಗೌರವಾಧ್ಯಕ್ಷ ಗಂಗಾಧರಪ್ಪ, ಹಸಿರು ಸೇನೆ ಅಧ್ಯಕ್ಷ ಕಸವ್ವನಹಳ್ಳಿ ನಾಗರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಭೈರನಾಯಕನಹಳ್ಳಿ ರಾಜು, ಉಪಾಧ್ಯಕ್ಷ ಸಹದೇವರೆಡ್ಡಿ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net