

ಕಾರವಾರ: ಅಕಾಲಿಕ ಮಳೆಯಿಂದ ರಾಜ್ಯದಾದ್ಯಂತ ರೈತರ (Farmers) ಬೆಳೆ ನಷ್ಟವಾಗಿದೆ. ಸರ್ಕಾರ ತಕ್ಷಣ ಜಂಟಿ ಸಮೀಕ್ಷೆ ನಡೆಸಿ, ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರಬೂರ್ ಶಾಂತಕುಮಾರ್ ಒತ್ತಾಯಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಬರದಿಂದ ಉತ್ತರ ಕರ್ನಾಟಕ ಭಾಗದ ರೈತರು ಸಮಸ್ಯೆ ಅನುಭವಿಸಿದ್ದರು. ಈಗ ಅತಿವೃಷ್ಟಿಯಿಂದ ಬತ್ತ, ಜೋಳ ಎಲ್ಲ ಬೆಳೆಗಳಿಗೆ ಶೇ.50 ಕ್ಕಿಂತ ಹೆಚ್ಚು ಹಾನಿಯಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ಎಲ್ಲರಿಗೂ ಶೀಘ್ರ ಬೆಳೆ ನಷ್ಟ ಪರಿಹಾರ ಸಿಗಲಿ ಎಂದರು. ಆನ್‌ಲೈನ್ ಬೆಟ್ಟಿಂಗ್ ದಂಧೆಯಿಂದ ಯುವಕರು ರಾಜ್ಯದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ತೆಲಂಗಾಣ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸಲಾಗಿದೆ. ರಾಜ್ಯದಲ್ಲಿಯೂ ಈ ವ್ಯವಹಾರಕ್ಕೆ ನಿಷೇಧ ಹೇರಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಮುಂಬರುವ ಅಧಿವೇಶನದಲ್ಲಿ ಈ ಸಂಬಂಧ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪ್ರತಿ ಟನ್ ಕಬ್ಬು ಬೆಳೆಯಲು 3825 ರೂ. ಖರ್ಚಾಗುತ್ತದೆ. ಹಾಗಿರುವಾಗ ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 3400 ರೂ. ಎಫ್‌ಆರ್‌ಪಿ ನಿಗದಿ ಮಾಡಿದೆ. ಅದು ವೈಜ್ಞಾನಿಕವಾಗಿಲ್ಲ. ಅಲ್ಲದೇ, ಕಾರ್ಖಾನೆಗಳು, ಕಟಾವು, ಸಾಗಣೆ ವೆಚ್ಚದಲ್ಲಿ ಮೋಸ ಮಾಡುತ್ತಿವೆ. ಇದರಿಂದ ರೈತರ ಹೊಲದ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಹಳಿಯಾಳ ಈ ಐ ಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಕಟಾವು ಸಾಗಾಣಿಕೆ ಕೂಲಿ ಬಾಕಿ ಟನ್ಗೆ 119 ರೂ. ಕಬ್ಬಿನ ಉಪ ಉತ್ಪನ್ನಗಳ ಲಾಭ 256 ರೂ ರೈತರ ಬಾಕಿ ಕೊಟ್ಟು ಕಾರ್ಖಾನೆ ಆರಂಭಿಸಬೇಕು. ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಕಬ್ಬಿನ ಎಫ್‌ಆರ್‌ಪಿ ದರವನ್ನು ಕೇಂದ್ರ ಸರ್ಕಾರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಲು ಕಾನೂನು ತಿದ್ದುಪಡಿ ಮಾಡಬೇಕು ಈ ಬಗ್ಗೆ ಲೋಕಸಭಾ ಸದಸ್ಯರು ಒತ್ತಾಯಿಸಬೇಕು. ಇತ್ತೀಚಿನ ದಿನಗಳಲ್ಲಿ ಅರಣ್ಯದ ಪರಿಸರ ಹಾಳಾಗುತ್ತಿದೆ ಪರಿಸರ ನಾಶದಿಂದ ಹವಾಮಾನ ಏರುಪೇರು ಆಗುತ್ತಿದೆ. ಸರ್ಕಾರ ಅರಣ್ಯದಲಿರುವ ಮೋಜಿನ ತಾಣ ರಿಸಾರ್ಟಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಮಹೇಶ ಬೆಳಗಾಂವಕರ್, ಪರಶುರಾಮ್ ಎತ್ತಿನಗುಡ್ಡ, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.