

ಮಂಡ್ಯ: ಕಾವೇರಿ ಹೋರಾಟದಂತಹ ಚಳವಳಿಗಳಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಜಿಲ್ಲಾ ಹಿತರಕ್ಷಣಾ ಸಮಿತಿಯನ್ನು ಕೆಲವೇ ಕೆಲವರು ಸೇರಿ ಪುನರ್ ರಚನೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅದನ್ನು ವಿಸರ್ಜಿಸಿ ಎಲ್ಲ ಸಂಘಟನೆಗಳ ಸಭೆ ಕರೆದು ಸಮಿತಿ ರಚಿಸುವಂತೆ ರಾಜ್ಯ ರೈತಪರ ಹೋರಾಟಗಾರರ ಸಂಘದ ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ಒತ್ತಾಯಿಸಿದರು.
ಮಾಜಿ ಸಂಸದ ಡಾ.ಜಿ.ಮಾದೇಗೌಡ ಅವರ ನಿಧನದ ನಂತರ ರೈತ ಹಿತರಕ್ಷಣಾ ಸಮಿತಿಯ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಲವರು ಪ್ರವಾಸಿ ಮಂದಿರದಲ್ಲಿ ಸಭೆ ಕರೆದು ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡು ತಮಗೆ ಬೇಕಾದವರನ್ನು ಪದಾಧಿಕಾರಿಗಳನ್ನಾಗಿ ನೇಮಿಸಿ ಪುನರ್‌ರಚಿಸಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾವೇರಿ ಹೋರಾಟದಲ್ಲಿ ಕನ್ನಡ, ರೈತ ಸಂಘಟನೆ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು. ಎಲ್ಲರನ್ನೂ ಸೇರಿಸಿಕೊಂಡು ಸಭೆ ಕರೆದು ಚರ್ಚಿಸಿ ಒಮ್ಮತದಿಂದ ಸಮಿತಿಯನ್ನು ರಚಿಸಬೇಕೇ ಹೊರತು ಕೆಲವರನ್ನು ಮಾತ್ರ ಸೇರಿಸಿಕೊಂಡಿದ್ದಾರೆ. ಬಗ್ಗೆ ಪ್ರಶ್ನೆ ಮಾಡಿದರೆ ಕೆಲವರು ಅನಾರೋಗ್ಯಕ್ಕೊಳಗಾಗಿದ್ದಾರೆ. ಹಾಗಾಗಿ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿಲ್ಲ ಎಂಬ ಸಬೂಬು ಹೇಳುತ್ತಾರೆ. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಸೇರಿದಂತೆ ಹಲವರು ಸಮಿತಿಯಲ್ಲಿ ಉನ್ನತ ಸ್ಥಾನದಲ್ಲಿದ್ದರು. ಅಂತಹವರನ್ನೇ ಸಮಿತಿಯ ಹೊರಗಿಟ್ಟು ರಚನೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೈತ ಮುಖಂಡರಾದ ಬಿ.ರಮೇಶ್, ರಾಜುಗೌಡ, ಎಂ.ಎಸ್.ಸೋಮಶೇಖರ್, ಮಹೇಂದ್ರಗೌಡ, ಕೃಷ್ಣ ಇದ್ದರು.