

ಮಂಡ್ಯ: ಮಂಡ್ಯ ಜನರ ಬಗ್ಗೆ ಅವಮಾನವಾಗುವ ರೀತಿ ಮಾಡಿದ್ದಾರೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಯಿತು.
ರೈತ ಸಂಘ ಏಕೀಕರಣ ಸಮಿತಿ ನೇತೃತ್ವದಲ್ಲಿ ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ವಿವಿಧ ಸಂಘಟನೆ ಕಾರ್ಯಕರ್ತರು, ಡಿಕೆಶಿ ವಿರುದ್ಧ ಘೋಷಣೆ ಮೊಳಗಿಸಿದರು. ಮಾತ್ರವಲ್ಲದೆ ಛತ್ರಿಗಳಿಗೆ ಡಿಕೆಶಿ ಭಾವಚಿತ್ರ ಅಂಟಿಸಿ ತಿಹಾರ್ ಜೈಲಿಗೆ ಹೋಗಿದ್ದು ಬಂದ ಛತ್ರಿ, ಅಂತಾರಾಜ್ಯ ಛತ್ರಿ ಡಿ.ಕೆ.ಶಿವಕುಮಾರ್, ದುರಂಹಕಾರಿ ಡಿಕೆಶಿಗೆ ಮಂಡ್ಯ ಜನತೆಯ ಧಿಕ್ಕಾರ ಎಂಬ ಬ್ಯಾನರ್‌ಗಳ ಪ್ರದರ್ಶನ ಮಾಡಿದರು. ಜತೆಗೆ ಕಲ್ಲುಗಳನ್ನು ಸುತ್ತಿಗೆಯಿಂದ ಹೊಡೆದು ಬಂಡೆ ಕಳ್ಳ ಎಂದು ಘೋಷಣೆ ಕೂಗಿದರು.
ನಂತರ ಸರ್‌ಎಂವಿ ಪ್ರತಿಮೆಯಿಂದ ಛತ್ರಿಗಳನ್ನು ಹಿಡಿದು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಪ್ರತಿಭಟನಾ ಮೆರವಣಿಗೆ ಹೊರಟು ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ ಹೆದ್ದಾರಿ ಸಂಚಾರ ಬಂದ್ ಮಾಡಿದರು. ಈ ವೇಳೆ ಪ್ರತಿಭಟನೆ ಲೆಕ್ಕಿಸದೇ ವಾಹನಗಳನ್ನು ಸಂಚಾರ ಮಾಡಲು ಮುಂದಾದ ಜನರ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಯ್ಯಯ್ಯೋ ಅನ್ಯಾಯ, ಅಯ್ಯಯ್ಯೋ ಅನ್ಯಾಯ. ಮಂಡ್ಯ ಜನರಿಗೆ ಅವಮಾನ ಮಾಡಿದ ಡಿಕೆಶಿ ಧಿಕ್ಕಾರ. ಜಿಲ್ಲೆಯ ಜನರ ಕ್ಷಮೆಯನ್ನು ಕೇಳಲೇಬೇಕು. ಮಂಡ್ಯದವರು ಛತ್ರಿಗಳ ಚಕ್ರವರ್ತಿಗಳು. ಕ್ಷಮೆ ಕೋರುವವರೆಗೂ ಹೋರಾಟ ಬಿಡಲ್ಲ ಎಂದು ಘೋಷಣೆ ಮೊಳಗಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಹೇಳಿಕೆ ನೀಡಿರುವುದು ನೋವುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಮಾ.24ರೊಳಗೆ ಡಿಕೆಶಿ ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕೆಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ತಮ್ಮ ಹೇಳಿಕೆಗೆ ಕ್ಷಮೆಯಾಚನೆ ಕೇಳಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಜಿಲ್ಲೆಯ ಜನರು ಚಳವಳಿಯಲ್ಲಿ ಭಾಗವಹಿಸುವುದರ ಜತೆಗೆ ಪ್ರಮುಖ ಹೋರಾಟ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ಛಾಪು ಮೂಡಿಸಿದ್ದಾರೆ. ಜಿಲ್ಲೆಯ ಜನತೆಯ ಬಗ್ಗೆ ಬೇರೆ ಜಿಲ್ಲೆಯ ಜನಕ್ಕೂ ಗೌರವ ಇದೆ. ಇಂತಹ ಜಿಲ್ಲೆಯ ಜನಗಳನ್ನು ಛತ್ರಿಗಳು ಎಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದೇ ಛತ್ರಿ ಬುದ್ಧಿ ಎಂಬುದು ಸಾಬೀತಾಗಿದೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ದಕ್ಕೆ ಜಿಲ್ಲೆಯ ಜನ ಆರು ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಈ ರೀತಿಯ ಗೇಲಿ ಮಾಡಿದ್ದಾರೆಯೇ?. ಇವರ ಚರಿತ್ರೆ ಏನು ಎಂಬುದು ರಾಜ್ಯದ ಜನಕ್ಕೆ ಗೊತ್ತಿದೆ. ಇವರಿಗೆ ಬುದ್ಧಿ ಕಲಿಸುವ ಕಾಲ ಬರುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜಿಲ್ಲೆಗೆ ಬಂದರೆ ಕಪ್ಪು ಬಾವುಟ ಪ್ರದರ್ಶಿಸಿ ಬಹಿಷ್ಕಾರ ಹಾಕುವುದರ ಜತೆಗೆ ಸಗಣಿ ಸೇವೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಯುವ ನಾಯಕ ಪಚ್ಚೆ ನಂಜುಂಡಸ್ವಾಮಿ, ಸಮಿತಿ ಸದಸ್ಯರಾದ ಇಂಡುವಾಳು ಚಂದ್ರಶೇಖರ್, ಶಂಭೂನಹಳ್ಳಿ ಸುರೇಶ್, ಅಣ್ಣೂರು ಮಹೇಂದ್ರ, ಶಿವಳ್ಳಿ ಚಂದ್ರು, ಹಲ್ಲೆಗೆರೆ ಶಿವರಾಂ, ಕನ್ನಡಸೇನೆ ಮಂಜುನಾಥ ಇತರರಿದ್ದರು.